ವಿಶಾಲ ಕಾಶಿ; ಪುಣ್ಯಸ್ಥಳಕ್ಕೆ ಭೇಟಿ ನೀಡಿದ ತಮಿಳು ನಟ

Vishal
Published on

ಕಾಶಿ. ಹಿಂದೂಗಳ ಪುಣ್ಯಸ್ಥಳ. ಜೀವನದಲ್ಲಿ ಒಮ್ಮೆಯಾದರೂ ಕಾಶಿ ವಿಶ್ವನಾಥನ ದರ್ಶನ ಮಾಡುವಾಸೆ ಪ್ರತಿಯೊಬ್ಬ ಹಿಂದೂಗು ಇರುತ್ತದೆ. ಇತ್ತೀಚೆಗಷ್ಟೇ ಕಾಶಿಗೆ ತಮಿಳು ನಟ ವಿಶಾಲ್ ಭೇಟಿ ನೀಡಿದ್ದರು. ವಿಶ್ವನಾಥನ ದರ್ಶನ ಮಾಡಿ ಮಂತ್ರಮುಗ್ಧರಾಗಿರುವ ಅವರು, ವಿಜಯವಾಣಿ ಜತೆ ತಮ್ಮ ಅನನ್ಯ ಅನುಭವ ಹಂಚಿಕೊಂಡಿದ್ದಾರೆ. ‘ಸಿನಿಮಾ ಚಿತ್ರೀಕರಣಕ್ಕೆಂದು ಹೋಗಿದ್ದೆ. ಆದರೆ, ಅಂದು ಕಾರಣಾಂತರಗಳಿಂದ ಚಿತ್ರೀಕರಣ ನಡೆಸಲಾಗಲಿಲ್ಲ. ಕಾಶಿ ವಿಶ್ವನಾಥನ ದರ್ಶನ ಮಾಡಬೇಕು ಅಂತ ಅಚಾನಕ್ಕಾಗಿ ಅನ್ನಿಸಿತು. ಸೀದಾ ಹೊರಟುಬಿಟ್ಟೆ. ಇದು ಕಾಶಿಗೆ ನನ್ನ ಮೊದಲ ಭೇಟಿ. ನವೀಕರಣ ಮಾಡಲಾಗಿದೆ ಅಂತ ತಿಳಿದಿತ್ತು. ಆದರೆ ಇಷ್ಟು ಅದ್ಭುತವಾಗಿ ಕಾಶಿ ಬದಲಾಗಿದೆ ಅಂತ ನಾನಂದುಕೊಂಡಿರಲಿಲ್ಲ. ಕಾಶಿ ವಿಶ್ವನಾಥನ ಮುಂದೆ ಕುಳಿತಾಗ ಇಡೀ ಪ್ರಪಂಚದ ಸಂಪರ್ಕವನ್ನು ಕಡಿದುಕೊಂಡು ಹೊರಬಂದಿರುವ ಅನುಭವ ನೀಡಿತು. ಪ್ರಧಾನಿ ಮೋದಿಯವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ’ ಎಂದು ಮಾತು ಪ್ರಾರಂಭಿಸುತ್ತಾರೆ ವಿಶಾಲ್.

ನಂತರ ‘ಅಲ್ಲಿಗೆ ಹೋಗುವ ಮುನ್ನ ಕಾಶಿ ವಿಶ್ವನಾಥ ಮಂದಿರ ಈ ಅನುಭವ ನೀಡಬಹುದು ಅಂತ ನಾನಂದುಕೊಂಡಿರಲಿಲ್ಲ. ಒಂದು ಶಾಂತತೆ ಭಾವನೆಯನ್ನು ನನ್ನಲ್ಲಿ ಮೂಡಿಸಿತು. ಗರ್ಭಗುಡಿಯ ಬಳಿ ವಿಶ್ವನಾಥನ ಮುಂದೆ ಕೆಲಕಾಲ ಕುಳಿತುಕೊಳ್ಳುವ, ಲಿಂಗವನ್ನು ಮುಟ್ಟಿ ನಮಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ. ಭಗವಂತನೇ ನನಗೆ ನೇರವಾಗಿ ಆಶೀರ್ವದಿಸಿದ ಅನುಭವ ನೀಡಿತು. ಜನರು ತಾಜ್​ವುಹಲ್ ಮಾತ್ರವಲ್ಲ ಕಾಶಿಯನ್ನೂ ನೋಡಬೇಕು. ಕೆಲಸದ ನಿಮಿತ್ತ ನಾನು ಬೇರೆ ದೇಶಗಳಿಗೆ ಹೋದರೆ ಖಂಡಿತವಾಗಿಯೂ ಅಲ್ಲಿನ ಜನರಿಗೆ ತಿರುಪತಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನಗಳಿಗೆ ಭೇಟಿ ನೀಡಲು ತಿಳಿಸುತ್ತೇನೆ.’ ಎಂದು ಹೇಳಿಕೊಳ್ಳುತ್ತಾರೆ ಅವರು. ವಿಶೇಷ ಅಂದರೆ ವಿಶಾಲ್ ಎಲ್ಲ ದೇವರನ್ನು ನಂಬುತ್ತಾರಂತೆ. ಹಿಂದೂ ದೇವತೆಗಳಂತೆಯೇ ಜೀಸಸ್, ಅಲ್ಲಾಹುರನ್ನು ಪ್ರಾರ್ಥಿಸುತ್ತಾರಂತೆ. ಈ ಬಾರಿ ಕಾಶಿ ವಿಶ್ವನಾಥ ದೇವಾಲಯ ಮಾತ್ರವಲ್ಲ ಕಾಮಾಕ್ಯ, ಗೋಮತಿ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಇನ್ನು ಕಾಶಿಯಲ್ಲಿ ಹಲವು ಘಾಟ್​ಗಳಿವೆ. ಅಲ್ಲಿ ಮೃತದೇಹಗಳನ್ನು ಸುಡುತ್ತಾರೆ. ಅಂತಹ ಘಾಟ್​ಗೂ ವಿಶಾಲ್ ಹೋಗಿದ್ದಾರೆ. ‘ಘಾಟ್​ನಲ್ಲಿ ಮೃತದೇಹಗಳನ್ನು ಸುಡುವುದನ್ನೇ 10 ನಿಮಿಷಗಳ ಕಾಲ ದಿಟ್ಟಿಸುತ್ತಾ ಜೀವನ ಎಂದರೇನು? ನಮ್ಮ ಜೀವನದ ಉದ್ದೇಶವೇನು? ಅಂತೆಲ್ಲ ಯೋಚಿಸುತ್ತಾ ನಿಂತುಬಿಟ್ಟೆ’ ಎನ್ನುತ್ತಾರೆ ವಿಶಾಲ್.

ಭಾರತೀಯ ಸಂಸ್ಕೃತಿಯಿಂದ ಬಾಲಿವುಡ್ ದೂರ: ಉತ್ತರ ಭಾರತದಲ್ಲಿ ವಿಶಾಲ್ ಚಿತ್ರೀಕರಣ ಮಾಡುತ್ತಿರುವಾಗ ನೂರಾರು ಮಂದಿ ಅವರ ಜತೆ ಸೆಲ್ಪೀ ಕ್ಲಿಕ್ಕಿಸಿಕೊಂಡರಂತೆ. ‘ನನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ. ಉತ್ತರ ಭಾರತೀಯರು ನನ್ನ ಸಿನಿಮಾಗಳನ್ನು ನೋಡಿ, ಗುರುತಿಸಿ, ನನ್ನ ಸಿನಿಮಾ, ನಟನೆ ಬಗ್ಗೆ ಮಾತನಾಡಿದರು. ಫೋಟೋಗಳನ್ನು ತೆಗೆದುಕೊಂಡರು. ಜತೆಗೆ ಕಡಿಮೆ ಅಂದರೆ ಹತ್ತು ಜನರಾದರೂ ಬಾಲಿವುಡ್ ಬಗ್ಗೆ ನಮ್ಮ ಭಾರತೀಯ ಆಚಾರ, ವಿಚಾರ, ಸಂಸ್ಕೃತಿಯಿಂದ ದೂರಾಗಿರುವುದೇ ಹಿಂದಿ ಚಿತ್ರರಂಗ ಹಿಂದುಳಿಯಲು ಕಾರಣ ಎಂದರು. ಹಾಗಂತ ಬೇರೆಲ್ಲ ಚಿತ್ರರಂಗಗಳಲ್ಲು ಎಲ್ಲ ಸಿನಿಮಾಗಳು ಗೆಲ್ಲುತ್ತಿವೆ ಅಂತಲ್ಲ. ಸೋಲು, ಗೆಲುವು ಇದ್ದೇ ಇರುತ್ತದೆ. ಆದರೆ ನಮ್ಮ ಆಚರಣೆ, ಸಂಸ್ಕೃತಿಯನ್ನು ಬಿಂಬಿಸುವ ನೆಲದ ಕಥೆಗಳನ್ನು ನೋಡಲು ಜನ ಇಷ್ಟಪಡುತ್ತಾರೆ. ದಕ್ಷಿಣದ ಇಂಡಸ್ಟ್ರಿಗಳು ಕಂಟೆಂಟ್ ವಿಷಯದಲ್ಲು ಮುಂದಿವೆ’ ಎಂದು ಹೇಳಿಕೊಳ್ಳುತ್ತಾರೆ.

ಲಾಠಿ ಹಿಡಿದ ವಿಶಾಲ್: ‘ಲಾಠಿ’ ವಿಶಾಲ್ ನಟಿಸಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಇದೇ ಡಿಸೆಂಬರ್ 22ರಂದು ಚಿತ್ರ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ವಿಶಾಲ್ ನಟಿಸಿರುವ ಹಲವು ತಮಿಳು ಚಿತ್ರಗಳು ಹಿಂದಿಗೆ ಡಬ್ ಆಗಿದ್ದು, ಆಗೊಮ್ಮೆ ಈಗೊಮ್ಮೆ ಟಿವಿಗಳಲ್ಲಿ ಪ್ರಸಾರವಾಗುತ್ತಿರುತ್ತವೆ. ಜತೆಗೆ ಕೆಲವು ಸಿನಿಮಾಗಳು ಯೂಟ್ಯೂಬ್​ನಲ್ಲು ನೋಡಬಹುದು. ಅವರ ಡಬ್ ಚಿತ್ರಗಳಿಗೆ ಹಿಂದಿಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಈಗ ನೇರವಾಗಿ ಹಿಂದಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net