

ತಮಿಳು ಸಿನಿಮಾ ‘ಚಿತ್ತ’ ಕನ್ನಡದಲ್ಲಿ ಡಬ್ ಆಗಿ ‘ಚಿಕ್ಕು’ ಶೀರ್ಷಿಕೆಯಲ್ಲಿ ಬಿಡುಗಡೆಯಾಗಿದ್ದು, ನಟ ಸಿದ್ಧಾರ್ಥ್ ಚಿತ್ರದ ಪ್ರಚಾರಕ್ಕೆ ಗುರುವಾರ (ಸೆ. 28) ಬೆಂಗಳೂರಿಗೆ ಆಗಮಿಸಿದ್ದರು. ಆದರೆ, ಸುದ್ದಿಗೋಷ್ಠಿಯ ವೇಳೆ ಮಧ್ಯ ಪ್ರವೇಶಿಸಿದ ಕನ್ನಡಪರ ಹೋರಾಟಗಾರರು, ‘ಕಾವೇರಿ ಹೋರಾಟದ ಸಮಯದಲ್ಲಿ ತಮಿಳು ಚಿತ್ರದ ಪ್ರಚಾರ ಬೇಕಾ?’ ಎಂದು ತಡೆಯೊಡ್ಡಿದ ಕಾರಣ, ಸಿದ್ಧಾರ್ಥ್ ಅಲ್ಲಿಂದ ಹೊರನಡೆದಿದ್ದರು.
ಘಟನೆ ಸಂಬಂಧ ನಟ ಶಿವರಾಜಕುಮಾರ್, ಸಿದ್ಧಾರ್ಥ್ ಬಳಿ ಕ್ಷಮೆಯಾಚಿಸಿದ್ದರು. ಇದೀಗ ಸಿದ್ಧಾರ್ಥ್ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ‘ಚೆನ್ನೈ ಮತ್ತು ಕೊಚ್ಚಿಯಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದಂತೆಯೇ, ಬೆಂಗಳೂರಿನಲ್ಲೂ ಕನ್ನಡ ಸ್ಟಾರ್‌ಗಳಿಗೆ ಹಾಗೂ 2000 ವಿದ್ಯಾರ್ಥಿಗಳಿಗೆ ಶೋ ಆಯೋಜಿಸುವ ಪ್ಲ್ಯಾನ್ ಇತ್ತು. ಆದರೆ, ಬಂದ್‌ಗೆ ಗೌರವದ ಸಂಕೇತವಾಗಿ ಪ್ರದರ್ಶನವನ್ನು ಕ್ಯಾನ್ಸಲ್ ಮಾಡಬೇಕಾಯಿತು.
ಇದರಿಂದ ನಿರ್ಮಾಪಕನಾಗಿ ನನಗೆ ಸಾಕಷ್ಟು ನಷ್ಟ ಸಂಭವಿಸಿತು. ಜತೆಗೆ ಒಂದೊಳ್ಳೆ ಚಿತ್ರವನ್ನು ಅಲ್ಲಿನ ಜನರಿಗೆ ತೋರಿಸಲು ಸಾಧ್ಯವಾಗಲಿಲ್ಲವಲ್ಲಾ ಅಂತ ಬೇಸರವೂ ಆಯಿತು. ಈಗ ಅದರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ನನ್ನ ಚಿತ್ರಕ್ಕೂ ಹೋರಾಟದ ವಿಷಯಕ್ಕೂ ಸಂಬಂಧವಿಲ್ಲ. ನಾನು ನಿರ್ಮಿಸುವ ಚಿತ್ರಗಳಲ್ಲಿ ನೀವು ನನ್ನ ಸಾಮಾಜಿಕ ಬದ್ಧತೆಯನ್ನು ನೋಡಬಹುದು’ ಎಂದು ಸಿದ್ಧಾರ್ಥ್ ಹೇಳಿಕೊಂಡಿದ್ದಾರೆ.
-ಏಜೆನ್ಸೀಸ್