

ಮುಂಬೈ: ಸಿನಿಮಾ ರಂಗದಲ್ಲಿ ಬರೋಬ್ಬರಿ 20 ವರ್ಷ ಪೂರೈಸಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ( Tamannaah Bhatia ), ಇಂದಿಗೂ ಸ್ಟಾರ್ ನಟಿಯರಲ್ಲಿ ಒಬ್ಬರೆನೆಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ನಾಯಕಿಯರ ಆಯಸ್ಸು ಕಡಿಮೆ ಎನ್ನುವ ಮಾತಿದೆ. ಆದರೆ, 20 ವರ್ಷ ಪೂರೈಸಿದರೂ ಅದೇ ಬೇಡಿಕೆ ಉಳಿಸಿಕೊಂಡಿರುವ ತಮನ್ನಾ ಆ ಮಾತನ್ನು ಸುಳ್ಳು ಮಾಡಿದ್ದಾರೆ.
ಹಿಂದಿ, ತೆಲುಗು, ತಮಿಳು ಮತ್ತು ಇತರ ಭಾಷೆಗಳಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದು, ಬಹುಭಾಷಾ ನಾಯಕಿ ಎನಿಸಿಕೊಂಡಿದ್ದಾರೆ. ಆದರೆ, ಕನ್ನಡದಲ್ಲಿ ಒಂದೇ ಒಂದು ಚಿತ್ರದಲ್ಲಿ ನಟನೆ ಮಾಡದಿದ್ದರೂ ನಿಖಿಲ್ ಕುಮಾರಸ್ವಾಮಿ ನಟನೆಯ ಮೊದಲ ಸಿನಿಮಾ ಜಾಗ್ವಾರ್ ಮತ್ತು ಯಶ್ ನಟನೆಯ ಕೆಜಿಎಫ್ 1 ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಇನ್ನು ವೈಯಕ್ತಿಕ ವಿಚಾರಕ್ಕೆ ಬರುವುದಾದರೆ, ಡೇಟಿಂಗ್ ವಿಚಾರದಲ್ಲೂ ತಮನ್ನಾ ಸದ್ದು ಮಾಡಿದ್ದಾರೆ. ಈ ಹಿಂದೆ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಅಬ್ದುಲ್ ರಜಾಕ್ ಜತೆ ತಮನ್ನಾ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ, ಅದು ವದಂತಿಯಾಗಿ ಮರೆಯಾಯಿತು. ಇತ್ತೀಚೆಗೆ ಬಾಲಿವುಡ್ ನಟ ವಿಜಯ್ ವರ್ಮಾ ಜತೆ ತಮನ್ನಾ ಹೆಸರು ಕೇಳಿಬರುತ್ತಿತ್ತು. ಇಬ್ಬರು ಜತೆಯಾಗಿಯೇ ಓಡಾಡುವ ಮೂಲಕ ವದಂತಿಗೆ ಪುಷ್ಠಿ ನೀಡಿದ್ದರು. ಅನೇಕ ಸಂದರ್ಭಗಳಲ್ಲಿ ಇಬ್ಬರು ಪರೋಕ್ಷವಾಗಿಯೂ ಮಾತನಾಡಿದ್ದರು. ಇಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿತ್ತು. ಇದರ ನಡುವೆ ಇಬ್ಬರ ಬ್ರೇಕಪ್ ಸುದ್ದಿಯು ಕೂಡ ಹೊರಬಿತ್ತು. ಅಲ್ಲದೆ, ತಮನ್ನಾ ಕೂಡ ವಿಜಯ್ ವರ್ಮಾರಿಂದ ಅಂತರ ಕಾಯ್ದುಕೊಂಡಿದ್ದು, ಬ್ರೇಕಪ್ ಸುದ್ದಿ ಖಚಿತ ಎನ್ನಲಾಗುತ್ತಿದೆ.
ಬ್ರೇಕಪ್ ನಂತರ ಇಬ್ಬರೂ ಎಲ್ಲಿಯೂ ಸಂಬಂಧದ ಬಗ್ಗೆ ಮಾತನಾಡಲಿಲ್ಲ. ಆದರೆ, ಇತ್ತೀಚೆಗೆ ಬಾಲಿವುಡ್ನಲ್ಲಿ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ತಮನ್ನಾ ನೀಡಿರುವ ಹೇಳಿಕೆಗಳನ್ನು ಸಿಕ್ಕಾಪಟ್ಟೆ ವೈರಲ್ ಆಗಿವೆ.
ನಿಮಗೆ ಯಾವ ರೀತಿಯ ಜನರು ಇಷ್ಟವಾಗುವುದಿಲ್ಲ ಎಂದು ನಿರೂಪಕರು ಕೇಳಿದಾಗ, ಉತ್ತರಿಸಿದ ತಮನ್ನಾ, ನಾನು ಯಾರನ್ನಾದರೂ ಸಹಿಸಿಕೊಳ್ಳಬಲ್ಲೆ ಆದರೆ, ಸುಳ್ಳು ಹೇಳುವವರನ್ನು ನಾನು ಸಹಿಸುವುದಿಲ್ಲ. ನಮಗೆ ಸುಳ್ಳು ಹೇಳಿ ಮೋಸ ಮಾಡುವ ಜನರನ್ನು ನಾನು ಎಂದಿಗೂ ಸಹಿಸುವುದಿಲ್ಲ. ಸದಾ ಸುಳ್ಳು ಹೇಳುವ ಜನರನ್ನು ನಿಭಾಯಿಸಲು ನನ್ನಿಂದ ಸಾಧ್ಯವಿಲ್ಲ ಎಂದು ತಮನ್ನಾ ಹೇಳಿದ್ದಾರೆ.
ಸಂದರ್ಶನದ ವಿಡಿಯೋ ತುಣುಕು ನೋಡಿದ ಅನೇಕ ನೆಟ್ಟಿಗರು, ತಮನ್ನಾ ಅವರು ವಿಜಯ್ ವರ್ಮಾ ಅವರನ್ನು ಉದ್ದೇಶಿಸಿಯೇ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ವಿಜಯ್, ತಮನ್ನಾಗೆ ಸುಳ್ಳು ಹೇಳಿದ್ದಾರೆ. ಅದಕ್ಕಾಗಿಯೇ ತಮನ್ನಾ ಲವ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ತಮನ್ನಾ ಪರೋಕ್ಷವಾಗಿ ವಿಜಯ್ ಬಗ್ಗೆ ಹೀಗೆ ಹೇಳಿದ್ದಾರೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. (ಏಜೆನ್ಸೀಸ್)