ಕರಿಯಪ್ಪನ ಹೊಸ ಕೆಮಿಸ್ಟ್ರಿ ... ಮತ್ತೆ ಜತೆಯಾಗಿ ನಟಿಸಿದ ನಾಣಿ-ಅಪೂರ್ವ

Present Prapancha
Published on

ಒಂದು ಚಿತ್ರ ಹಿಟ್ ಆದರೆ, ಅದರ ನಾಯಕ-ನಾಯಕಿ ಜತೆಯಾಗಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುವುದುಂಟು. ಅದರಲ್ಲೂ ಅವರಿಬ್ಬರ ಮಧ್ಯೆ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿದ್ದರಂತೂ ಇನ್ನಷ್ಟು ಜತೆಯಾಗಿ ನಟಿಸುವ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬರುವುದುಂಟು. ಈಗ ನಾಣಿ ಮತ್ತು ಅಪೂರ್ವ ಅವರಿಗೂ ಅಂಥದ್ದೇ ಒಂದು ಚಾನ್ಸ್ ಸಿಕ್ಕಿದೆ.

ಕಳೆದ ವರ್ಷದ ಹಿಟ್ ಸಿನಿಮಾಗಳ ಪೈಕಿ ‘ಕೆಮಿಸ್ಟ್ರಿ ಆಫ್​ ಕಾರ್ಯಪ್ಪ’ ಸಹ ಒಂದು. ಈ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಚಂದನ್ ಆಚಾರ್ ಮತ್ತು ಸಂಜನಾ ನಟಿಸಿದ್ದರೂ, ಹೆಚ್ಚು ಗಮನ ಸೆಳೆದಿದ್ದು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ತಬಲಾ ನಾಣಿ ಮತ್ತು ಅಪೂರ್ವ. ಚಂದನ್ ಅವರ ತಂದೆ-ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಾಣಿ ಮತ್ತು ಅಪೂರ್ವ ತಮ್ಮ ಅಭಿನಯದಿಂದ ಗಮನಸೆಳೆದಿದ್ದರು. ಈ ಜೋಡಿ ಯಶಸ್ವಿಯಾಗುತ್ತಿದ್ದಂತೆಯೇ, ‘ಕ್ರಿಟಿಕಲ್ ಕೀರ್ತನೆಗಳು’ ಎಂಬ ಇನ್ನೊಂದು ಹೊಸ ಚಿತ್ರದಲ್ಲಿ ನಾಣಿ ಮತ್ತು ಅಪೂರ್ವ ಜತೆಯಾಗಿ ನಟಿಸಿದ್ದರು.

ಈಗ ‘ಪ್ರೆಸೆಂಟ್ ಪ್ರಪಂಚ - 0 ಪರ್ಸೆಂಟ್ ಲವ್’ ಎಂಬ ಹೊಸ ಚಿತ್ರದಲ್ಲೂ ಈ ಜೋಡಿ ಮತ್ತೊಮ್ಮೆ ರಿಪೀಟ್ ಆಗಿದೆ. ಈ ಚಿತ್ರದಲ್ಲೂ ನಾಣಿ ಮತ್ತು ಅಪೂರ್ವ ಅವರು ನಟಿಸಿದ್ದು, ಅವರ ಪಾತ್ರವೇನು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯಕ್ಕಂತೂ ಅವರಿಬ್ಬರ ಪಾತ್ರದ ಬಗ್ಗೆ ಚಿತ್ರತಂಡ, ಯಾವುದೇ ವಿಷಯವನ್ನು ಬಿಟ್ಟುಕೊಡದೆ, ರಹಸ್ಯ ಕಾಪಾಡಿಕೊಂಡಿದೆ.

ಈ ಹಿಂದೆ, ‘ಸಂಯುಕ್ತ 2’ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನಿರ್ದೇಶಿಸಿದ್ದ ಅಭಿರಾಮ್, ‘ಪ್ರೆಸೆಂಟ್ ಪ್ರಪಂಚ’ ಚಿತ್ರವನ್ನು ನಿರ್ದೇಶಿಸಿದ್ದು, ಅವರೇ ಕಥೆ-ಚಿತ್ರಕಥೆ ರಚಿಸಿದ್ದಾರೆ. ಇನ್ನು ‘ಸಂಯುಕ್ತ 2’ ಮತ್ತು ‘ಕೆಮಿಸ್ಟ್ರಿ ಆಫ್​ ಕಾರ್ಯಪ್ಪ’ ಚಿತ್ರವನ್ನು ನಿರ್ಮಿಸಿದ್ದ ಮಂಜುನಾಥ್, ಈ ಚಿತ್ರದಲ್ಲಿ ಹೀರೋ ಆಗಿದ್ದು, ಅರ್ಜುನ್ ಮಂಜುನಾಥ್ ಎಂದು ಹೆಸರಿಟ್ಟುಕೊಂಡಿದ್ದಾರೆ. ನಾಯಕಿಯರಾಗಿ ಸಂಭ್ರಮಶ್ರೀ ಮತ್ತು ಅಕ್ಷತ ನಟಿಸಿದ್ದು, ಮಿಕ್ಕಂತೆ ಎಸ್. ನಾರಾಯಣ್, ಓಂಪ್ರಕಾಶ್ ರಾವ್ ಮುಂತಾದವರು ನಟಿಸಿದ್ದಾರೆ.

ಈಗಾಗಲೇ ಚಿತ್ರ ಬಹುತೇಕ ಸಂಪೂರ್ಣವಾಗಿದ್ದು, ಲಾಕೌಟ್ ಮುಗಿದ ನಂತರ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net