ವಿಷ ಕಾರೋದು ಕಂಗನಾಗೆ ಅಭ್ಯಾಸವಾಗಿಬಿಟ್ಟಿದೆ: ಸ್ವರಾ ಭಾಸ್ಕರ್​

Kangana - Swara
Published on

ಮುಂಬೈ: ಬಾಲಿವುಡ್​ ನಟಿಯರಾದ ಕಂಗನಾ ರಣಾವತ್​ ಮತ್ತು ಸ್ವರಾ ಭಾಸ್ಕರ್​ ನಡುವಿನ ಜಗಳ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ, ಅವರಿಬ್ಬರ ನಡುವಿನ ಕಚ್ಚಾಟ ಒಂದಲ್ಲಾ ಒಂದು ಕಾರಣಕ್ಕೆ ಮುಂದುವರೆಯುತ್ತಿದ್ದು, ಅದು ಈಗ ಇನ್ನೊಂದು ಹಂತ ಮುಟ್ಟಿದೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಕಂಗನಾ ಅಪಹಾಸ್ಯ ಮಾಡಿದ್ದರು. ಅದರಲ್ಲೂ ವೃದ್ಧೆಯೊಬ್ಬರು 100 ರೂಪಾಯಿಗಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂಬಂತಹ ಹೇಳಿಕೆಗಳ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕ ಟೀಕೆಗೊಳಗಾಗಿದ್ದವು. ಕಂಗನಾ ಅವರ ಹೇಳಿಕೆ ಮತ್ತು ನಿಲುವುಗಳನ್ನು ಖಂಡಿಸಿ, ಹಲವು ಬಾಲಿವುಡ್​ ಸೆಲೆಬ್ರಿಟಿಗಳು ಮಾತನಾಡಿದ್ದುರ. ಈಗ ಈ ಸಾಲಿಗೆ ಸ್ವರಾ ಭಾಸ್ಕರ್​ ಸಹ ಸೇರಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಕಂಗನಾ ಮಾತುಗಳು ಅತಿಯಾಗುತ್ತಿವೆ. ಅದರಲ್ಲೂ ಇತ್ತೀಚೆಗೆ ಎಲ್ಲರ ಮೇಲೂ ವಿಷಯ ಕಾರೋದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಅವರು ಸೋಷಿಯಲ್​ ಮೀಡಿಯಾದಲ್ಲಿ ಏನೆಲ್ಲಾ ಬರೆಯುತ್ತಾರೋ ಅಥವಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೋ, ಅದರಲ್ಲಿ ಕಲ್ಪನೆಯೇ ಜಾಸ್ತಿ ಇರುತ್ತದೆ' ಎಂದು ಸ್ವರಾ ಹೇಳಿದ್ದಾರೆ.

ಹಿರಿಯರ ಬಗ್ಗೆ ಕಂಗನಾಗೆ ಸ್ವಲ್ಪವೂ ಗೌರವವಿಲ್ಲ ಎಂದು ಆರೋಪಿಸಿರುವ ಸ್ವರಾ, 'ಇತ್ತೀಚೆಗೆ ಜಯಾ ಬಚ್ಚನ್​ ಮತ್ತು ಬೇರೆ ಹಿರಿಯ ನಟಿಯರ ಬಗ್ಗೆಯೂ ಕಂಗನಾ ಬಹಳ ಕೆಟ್ಟದಾಗಿ ಮಾತನಾಡಿದ್ದರು. ಇನ್ನು ಕೆಲವರ ಬಗ್ಗೆ ಅವರ ಮಾತುಗಳಂತೂ ಅತಿರೇಕವಾಗಿದೆ. ಅದರಲ್ಲೂ ದೆಹಲಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಂದರ್​ ಕೌರ್​ ಎಂಬ ಹಿರಿಯ ರೈತರ ಬಗ್ಗೆ ಇಲ್ಲಸಲ್ಲದ ಸುಳ್ಳು ಹೇಳುವುದರ ಜತೆಗೆ, ನೂರು ರೂಪಾಯಿ ಕೊಟ್ಟರೆ ಪ್ರತಿಭಟನೆ ಬರುತ್ತಾರೆ ಎಂಬ ಮಾತುಗಳು ನಿಜಕ್ಕೂ ಅಕ್ಷಮ್ಯ. ಇಂಥವನ್ನೆಲ್ಲಾ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ' ಎಂದು ಸ್ವರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net