

ಯಾಕೋ ಈ ನೆಪೋಟಿಸಂ ಕುರಿತ ಚರ್ಚೆ ಬಾಲಿವುಡ್ನಲ್ಲಿ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸುಶಾಂತ್ ಸಿಂಗ್ ಸಾವಿನ ನಂತರ ಶುರುವಾದ ಈ ಚರ್ಚೆ, ಈಗ ಎಲ್ಲಿಂದ ಎಲ್ಲಿಗೋ ಹೋಗಿ ಮುಟ್ಟುತ್ತಿದೆ ಎನ್ನುವುದು ವಿಚಿತ್ರ.
ಅದರಲ್ಲೂ, ನಟಿ ಕಂಗನಾ ಈ ವಿಷಯದಲ್ಲಿ ಸಾಕಷ್ಟು ಕೆಸರೆರಚಾಟ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಬಾಲಿವುಡ್ನಲ್ಲಿ ಕೇಳಿ ಬರುತ್ತಿದೆ. ಇತ್ತೀಚೆಗೆ ಮಾತನಾಡುವ ಭರದಲ್ಲಿ, ತಮ್ಮ 'ಕ್ವೀನ್' ಚಿತ್ರದಿಂದ ಭಾರತದಲ್ಲಿ ಮಹಿಳಾ ಪ್ರಧಾನ ಮತ್ತು ಹೊಸ ಅಲೆಯ ಚಿತ್ರಗಳು ಶುರುವಾದವು ಎಂದು ಹೇಳಿದ್ದು ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.
ಚಲನಚಿತ್ರ ಇತಿಹಾಸ ಗೊತ್ತಿರುವವರು, ಕಂಗನಾ ಅವರ ಹೇಳಿಕೆ ಅದೆಷ್ಟು ಹಾಸ್ಯಾಸ್ಪದವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕಂಗನಾ ಅವರಿಂದ, 'ಬಿ-ಗ್ರೇಡ್' ನಟಿ ಎಂದು ಕರೆಸಿಕೊಂಡಿರುವ ಸ್ವರಾ ಭಾಸ್ಕರ್, ಈ ಕುರಿತು ಸಾಕಷ್ಟು ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸ್ತ್ರೀವಾದಿ ಸಿನಿಮಾಗಳ ಟ್ರೆಂಡ್ ಶುರುವಾಗಿದ್ದು ಕಂಗನಾ ಅವರ 'ಕ್ವೀನ್' ಚಿತ್ರದಿಂದ. 'ಪಥೇರ್ ಪಾಂಚಾಲಿ'ಯ ಜತೆಜತೆಗೇ ಕಂಗನಾ ಹಲವು ಹೊಸ ಅಲೆಯ ಸಿನಿಮಾಗಳನ್ನು ಮಾಡಿಕೊಂಡು ಬಂದರು. ಅಷ್ಟೇ ಅಲ್ಲ, ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಕೊಡಿಸಿದ್ದೇ ಕಂಗನಾ' ಎಂದು ಸ್ವರಾ ಕಾಲೆಳೆದು ಬಿಸಾಕಿದ್ದಾರೆ.
ಸ್ವರಾ ಅವರ ಈ ಟ್ವೀಟ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವರು ಇದನ್ನಿಟ್ಟುಕೊಂಡು ಕಂಗನಾಗೆ ಉತ್ತರ ಕೊಡುತ್ತಿದ್ದಾರೆ. ಯಾವಾಗ ಸ್ವರಾ ಇಂಥದ್ದೊಂದು ಟ್ವೀಟ್ ಮಾಡಿದರೋ, ತಕ್ಷಣ ಎಚ್ಚೆತ್ತುಕೊಂಡ ಕಂಗನಾ ಅವರ ಮಾಧ್ಯಮದ ತಂಡವು, ಇನ್ನೊಂದು ಟ್ವೀಟ್ ಮಾಡುವ ಮೂಲಕ ಉತ್ತರ ಕೊಟ್ಟಿದೆ.
'ಸ್ವರಾ, ಭಾರತೀಯ ಚಿತ್ರರಂಗದ ಸುವರ್ಣ ಯುಗದ ಸಂದರ್ಭದಲ್ಲಿ ನೀವ್ಯಾರೂ ಹುಟ್ಟಿರಲಿಲ್ಲ. ನೀವೆಲ್ಲಾ ಹುಟ್ಟಿದ್ದು ಮಾಫಿಯಾ ಮತ್ತು ಡಾನ್ಗಳು ಈ ಅದ್ಭುತ ಚಿತ್ರರಂಗವನ್ನು ಹಾಳು ಮಾಡಿದ ಮೇಲೆ. ಇನ್ನು 'ಕ್ವೀನ್' ನಂತರ ಸ್ತ್ರೀವಾದದ ಮತ್ತು ಹೊಸ ಅಲೆಯ ಚಿತ್ರಗಳು ಟ್ರೆಂಡ್ ಇನ್ನೂ ಹೆಚ್ಚಾಯಿತು. ಇದು ತಪ್ಪಾಗಿದ್ದರೆ, ಸರಿಯಾದ ಮಾಹಿತಿ ಕೊಡಿ' ಎಂದು ಕಂಗನಾ ಅವರ ತಂಡ ಕೇಳಿದೆ.
ಅಷ್ಟೇ ಅಲ್ಲ, ಸ್ವರಾ ಒಂದು ಗುರುತರವಾದ ಆರೋಪವನ್ನು ಸಹ ಹೊರಿಸಿದೆ, 'ಸುಶಾಂತ್ ಅವರ ಸಾವಿಗೆ ಕಾರಣವೇನು ಎಂಬ ವಿಷಯವನ್ನು ಮರೆಮಾಚುವುದಕ್ಕೆ ಈ ತರಹದ ವಿಷಯಗಳನ್ನು ನೀವೆಲ್ಲಾ ಕೆದಕುತ್ತಿರುವುದು ಸ್ಪಷ್ಟವಾಗುತ್ತಿದೆ. ಭಯೋತ್ಪಾದಕರನ್ನು ಮತ್ತು ರಾಷ್ಟ್ರ ವಿರೋಧಿಗಳನ್ನು ಪೋಷಿಸುವುದರ ಜತೆಗೆ, ಸಿನಿಮಾ ಮಾಫಿಯಾ ಡಾನ್ಗಳ ಸಹಾಯಕ್ಕೂ ನೀವು ನಿಂತಿದ್ದೀರಾ. ನಿಮಗೆ ನಾಚಿಕೆಯಾಗಬೇಕು' ಎಂದು ಟ್ವೀಟ್ ಮಾಡಲಾಗಿದೆ.