ಸಸ್ಪೆನ್ಸ್ ಥ್ರಿಲ್ಲರ್ ಪರಿಮಳ ಡಿಸೋಜಾ; 107 ಮಂದಿ ಕಲಾವಿದರು ಅಭಿನಯಿಸಿರುವ ಸಿನಿಮಾ

parimala dsouza
Published on

ಬೆಂಗಳೂರು: ಡಾ. ಗಿರಿಧರ್ ಎಚ್.ಟಿ. ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ‘ಪರಿಮಳ ಡಿಸೋಜಾ’. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಿರ್ಮಾಪಕ ಎಂ.ಎನ್. ಸುರೇಶ್ ಹಾಗೂ ನಟಿ ಭವ್ಯಾ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ಯುವಪ್ರತಿಭೆ ವಿನೋದ್ ಶೇಷಾದ್ರಿ ನಟಿಸಿ, ನಿರ್ಮಿಸಿರುವ ಸಿನಿಮಾ ‘ಪರಿಮಳ ಡಿಸೋಜಾ’. ‘ನಾನು ಪೊಲೀಸ್ ಪಾತ್ರದಲ್ಲಿ ನಟಿಸಿದ್ದೇನೆ. ಜತೆಗೆ ಒಂದು ಗೀತೆಗೆ ಸಾಹಿತ್ಯ ಬರೆದಿದ್ದೇನೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದರೂ ಆ್ಯಕ್ಷನ್, ಸೆಂಟಿಮೆಂಟ್ ಒಳಗೊಂಡ ಕೌಟುಂಬಿಕ ಸಿನಿಮಾ. ಚಿತ್ರದಲ್ಲಿ ಒಟ್ಟು 107 ಕಲಾವಿದರು ಅಭಿನಯಿಸಿದ್ದಾರೆ’ ಎಂದು ಮಾಹಿತಿ ನೀಡಿದರು. ನಂತರ ನಿರ್ದೇಶಕ ಡಾ. ಗಿರಿಧರ್, ‘ಹಿಂದು ಕುಟುಂಬದ ಮನೆಗೆ ಕ್ರೈಸ್ತ ಹೆಣ್ಣುಮಗಳು ಸೊಸೆಯಾಗಿ ಬರುತ್ತಾಳೆ. ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ, ಒಂದು ಘಟನೆಯಿಂದ ಆಗುವ ಬದಲಾವಣೆಗಳ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಚಿತ್ರಕ್ಕೆ ಕಥೆಯೇ ಹೀರೋ’ ಎಂದು ಹೇಳಿಕೊಂಡರು.

ಸೆ. 15ರಂದು ‘ಪರಿಮಳ ಡಿಸೋಜಾ’ ರಿಲೀಸ್ ಆಗಲಿದ್ದು, ಕೋಮಲ ಬನವಾಸೆ, ಸುನೀಲ್ ಮೋಹಿತ್, ರೋಹಿಣಿ, ಚಂದನಾ, ಶಿವಕುಮಾರ್ ಆರಾಧ್ಯ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net