

`ನನ್ ಲೈಫ್‍ನಲ್ಲಿ ಡ್ರಗ್ಸ್ ತಗೊಂಡಿಲ್ಲ. ಬೇಕಾದ್ರೆ ನನ್ನ ಬ್ಲಡ್ ಟೆಸ್ಟ್ ಮಾಡಿ ...'
ಹಾಗಂತ ಇತ್ತೀಚೆಗಷ್ಟೇ ನಟಿ ಮತ್ತು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಹೇಳಿಕೊಂಡಿದ್ದರು. ಸುಶಾಂತ್ ಆತ್ಮಹತ್ಯೆಯ ಹಿಂದೆ ಡ್ರಗ್ಸ್ ಮಾಫಿಯಾ ಕೈವಾಡವಿದೆ ಎಂಬ ವಿಷಯ ಹೊರಬಂದ ಬಳಿಕ, ರಿಯಾ ಮಾತನಾಡಿದ್ದರು. ತನಗೆ ಡ್ರಗ್ಸ್ ಚಟವಿರಲಿಲ್ಲ, ಸುಶಾಂತ್‍ಗೆ ಸ್ವಲ್ಪ ಚಟವಿತ್ತು ಎಂದು ಹೇಳಿಕೊಂಡಿದ್ದರು. ಬೇಕಾದರೆ ತನ್ನ ಬ್ಲಡ್ ಟೆಸ್ಟ್ ಮಾಡಿ ನಿಜ ತಿಳಿಯಬಹುದು ಎಂದು ಸಹ ಅವರು ಹೇಳಿಕೊಂಡಿದ್ದರು.
ರಿಯಾ ಅವರ ಈ ಹೇಳಿಕೆಯಿಂದ ಸುಶಾಂತ್ ಅವರ ಕುಟುಂಬಕ್ಕೆ ಸಾಕಷ್ಟು ನೋವಾಗಿದೆ. ಈ ನಿಟ್ಟಿನಲ್ಲಿ, ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ಒಂದಿಷ್ಟು ವಾಟ್ಸಾಪ್ ಮೆಸೇಜ್‍ಗಳನ್ನು ಬಿಡುಗೆಡೆ ಮಾಡಿದ್ದಾರೆ. ಇದರಲ್ಲಿ ರಿಯಾ ಮತ್ತು ಆಕೆಯ ಸಹೋದರ ಹೇಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎಂಬ ವಿವರಣೆ ಇದೆ. ಇದನ್ನು ಬಿಡುಗಡೆ ಮಾಡಿರುವ ಅವರು, ರಿಯಾಗೆ ಡ್ರಗ್ಸ್ ಚಟವಿತ್ತು ಎಂದು ಹೇಳುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಶ್ವೇತಾ ಹೇಳುವಂತೆ ಸುಶಾಂತ್ ಸ್ನೇಹಿತರೆಲ್ಲಾ ಒಂದು ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಸುಶಾಂತ್, ರಿಯಾ, ಶೌವಿಕ್ ಚಕ್ರವರ್ತಿ ಸ್ಯಾಮ್ಯುಯಲ್ ಮಿರಾಂಡಾ, ಸಿದ್ಧಾರ್ಥ್ ಪಿಠಾಣಿ ಸೇರಿದಂತೆ ಹಲವರು ಈ ಗ್ರೂಪ್‍ನಲ್ಲಿ ಇದ್ದಾರೆ. ಎನ್.ಐ.ಎಫ್.ಡಬ್ಲ್ಯು ಹೆಸರಿನ ಈ ಗ್ರೂಪ್‍ನಲ್ಲಿ ಡ್ರಗ್ಸ್ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಈ ಗ್ರೂಪ್‍ನಲ್ಲಿ ಕಳೆದ ವರ್ಷ ಡೂಬಿ, ವಾಟರ್‍ಸ್ಟೋನ್ಸ್, ಬ್ಲೂಬೆರ್ರಿ ಕುಶ್ ಮುಂತಾದ ಡ್ರಗ್ಸ್‍ಗಳ ಬಗ್ಗೆ ಚರ್ಚೆಯಾಗಿದೆ. ಯಾರ ಬಳಿ ಏನಿದೆ, ಯಾರಿಗೆ ಏನೆಲ್ಲಾ ಬೇಕಾಗಿದೆ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ.
ಈ ವಾಟ್ಸಪ್‍ಗಳ ಸ್ಕ್ರೀನ್‍ಶಾಟ್‍ಗಳನ್ನು ಸುಶಾಂತ್ ಸಹೋದರಿ ಸೋಷಿಯಲ್ ಮೀಡಿಯಾ ಮೂಲಕ ಬಿಡುಗಡೆ ಮಾಡಿರುವುದಷ್ಟೇ ಅಲ್ಲ, ಇದರಿಂದ ಏನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಈ ಹಿಂದೆ ರಿಯಾ ತನ್ನ ಬಳಿ ಇಎಂಐ ಕಟ್ಟುವುದಕ್ಕೆ 17 ಸಾವಿರ ಹಣವಿಲ್ಲ ಎಂದು ಹೇಳಿಕೊಂಡಿದ್ದರು. ಇದರ ಕುರಿತು ಪ್ರಶ್ನಿಸಿರುವ ಶ್ವೇತಾ ಸಿಂಗ್ ಕೀರ್ತಿ, `ಒಂದು ಕಡೆ 17 ಸಾವಿರ ಇಎಂಐ ಕಟ್ಟುವುದಕ್ಕೆ ಆಗುವುದಿಲ್ಲ ಎನ್ನುತ್ತೀಯ. ಇನ್ನೊಂದು ಕಡೆ ದೇಶದ ದುಬಾರಿ ಲಾಯರ್ ನಿನ್ನ ಕೇಸ್ ನೋಡಿಕೊಳ್ಳುತ್ತಿದ್ದಾರೆ. ದುಡ್ಡಿಲ್ಲದವಳು ಅವರಿಗೆ ಹೇಗೆ ಕೊಡುತ್ತೀರಿ' ಎಂದು ಶ್ವೇತಾ ಪ್ರಶ್ನಿಸಿದ್ದಾರೆ. ಈ ಮೂಲಕ ಡ್ರಗ್ಸ್ ಹಣವನ್ನು ಈ ಕೆಲಸಕ್ಕೆ ಬಳಸಿಕೊಳ್ಳತ್ತಿರುವ ಸಂಶಯವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.