ಸುಶಾಂತ್​ ಕನಸನ್ನು ನನಸು ಮಾಡಿದ ಅಭಿಮಾನಿಗಳು ... ಏನದು ಕನಸು?

Sushant Singh Rajaput - Final
Published on

ಸುಶಾಂತ್​ ಸಿಂಗ್​ ರಜಪೂತ್​ ಬಹಳಷ್ಟು ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡಿದ್ದರು. ಹಲವು ಕನಸುಗಳನ್ನು ಕಂಡಿದ್ದರು. ಆದರೆ, ಕಾರಣಾಂತರಗಳಿಂದ ಆ ಕನಸುಗಳೆಲ್ಲಾ ನನಸಾಗುವುದಕ್ಕೆ ಮುಂಚೆಯೇ ಅವರು ಇಹಲೋಕ ತ್ಯಜಿಸಿದರು. ಕನಸುಗಳು ಹಾಗೆಯೇ ಉಳಿದು ಹೋದವು.

ಸುಶಾಂತ್​ ಸಾವಿನ ನಂತರ, ಅವರ ಹಲವು ಕನಸುಗಳನ್ನು ನನಸಾಗಿಸಿ ಎಂದು ಅವರ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಅಭಿಮಾನಿಗಳಿಗೆ ಕರೆ ನೀಡಿದ್ದರು. ಸುಶಾಂತ್​ಗೆ 1000 ಗಿಡಗಳನ್ನು ನೆಡಬೇಕು ಎಂಬ ಆಸೆ ಇತ್ತಂತೆ. ಈ ನಿಟ್ಟಿನಲ್ಲಿ ಪ್ಲಾಂಟ್ಸ್​ಫಾರ್​ಎಸ್ಎಸ್​ಆರ್​ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದರು ಶ್ವೇತಾ.

ಇದರ ಅಂಗವಾಗಿ ಸುಶಾಂತ್​ ಅವರ ಮಾಜಿ ಗೆಳೆತಿ ಅಂಕಿತಾ ಲೋಖಂಡೆ, ಇತ್ತೀಚೆಗೆ ಹಲವು ಗಿಡಗಳನ್ನು ಖರೀದಿಸಿದ್ದರು. ಈ ಕುರಿತು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿಕೊಂಡಿರುವ ಅವರು, 'ಗಿಡ ನೆಡುವುದು ಸುಶಾಂತ್​ ಅವರ 50 ಕನಸುಗಳಲ್ಲಿ ಒಂದಾಗಿತ್ತು. ಗಿಡ ನೆಡುವ ಕನಸಿಗೆ ನನ್ನ ಕಡೆಯಿಂದ ಒಂದು ಸಣ್ಣ ಕಾಣಿಕೆ. ಬೇರೆಯವರು ಸಹ ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದು ನಂಬಿದ್ದೇನೆ' ಎಂದು ಅವರು ಹೇಳಿಕೊಂಡಿದ್ದರು.

ಅಂಕಿತಾ ಅವರ ಈ ಮಾತನ್ನು ಅಭಿಮಾನಿಗಳು ಅಕ್ಷರಶಃ ಪಾಲಿಸಿದ್ದಾರೆ. ಸುಶಾಂತ್​ಗೆ ಸಾವಿರ ಗಿಡಗಳನ್ನು ನೆಡುವ ಆಸೆ ಇತ್ತಂತೆ. ಆದರೆ, ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ ಎಂದು ಸ್ವತಃ ಶ್ವೇತಾ ಹೇಳಿಕೊಂಡಿದ್ದಾರೆ.

ಈ ಕುರಿತು ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಅವರೊಂದು ವಿಡಿಯೋ ಹಾಕಿಕೊಂಡಿದ್ದಾರೆ. ಜಗತ್ತಿನಾದ್ಯಂತ ಸುಶಾಂತ್​ ಅಭಿಮಾನಿಗಳು ಗಿಡ ನೆಡುವ ಹಲವು ದೃಶ್ಯಗಳು ಈ ಎರಡು ನಿಮಿಷಗಳ ವಿಡಿಯೋದಲ್ಲಿದೆ. ಅಂಕಿತಾ ಲೋಖಂಡೆ ಸಹ ಗಿಡ ನೆಡುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು.

ಈ ಕುರಿತು ಬರೆದಿರುವ ಅವರು, 'ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಜಗತ್ತಿನಾದ್ಯಂತ ನೆಡಲಾಗಿದೆ. ಇಂಥದ್ದೊಂದು ಕೆಲಸದಲ್ಲಿ ಭಾಗಿಯಾದ ಎಲ್ಲರಿಗೂ ಥ್ಯಾಂಕ್ಸ್​' ಎಂದು ಶ್ವೇತಾ ಸಿಂಗ್​ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net