ಎರಡು ಭಯಂಕರ ಖಾಯಿಲೆಗಳಿಂದ ಬಳಲುತ್ತಿದ್ದರಂತೆ ಸುಶಾಂತ್​!

Sushanth Singh - Final
Published on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಸರಿಯಾಗಿ ಒಂದು ತಿಂಗಳಾಗಿದೆ. ಈ ಒಂದು ತಿಂಗಳಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಈ ಆತ್ಮಹತ್ಯೆಗೆ ಕಾರಣವೇನಿರಬಹುದು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈಗಾಗಲೇ ಸುಶಾಂತ್​ ಕುಟುಂಬದವರು, ಆಪ್ತರು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಮುಂಬೈ ಪೊಲೀಸ್​ ವಿಚಾರಣೆ ನಡೆಸಿದ್ದು, ಹಲವು ವಿಷಯಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಸುಶಾಂತ್​ ಎರಡು ಭಯಂಕರ ಖಾಯಿಲೆಗಳಿಂದ ಬಳಲುತ್ತಿದ್ದರು ಎಂಬ ವಿಷಯ ಗೊತ್ತಾಗಿದೆ.

ಸುಶಾಂತ್​ ಆತ್ಮಹತ್ಯೆ ಪ್ರಕರಣವನ್ನು ತನಿಖೆಗೆ ಎತ್ತಿಕೊಂಡ ಪೊಲೀಸರಿಗೆ, ಅವರ ಮನೆಯಲ್ಲಿ ಕೆಲವು ಮೆಡಿಕಲ್​ ಪ್ರಿಸ್ಕ್ರಿಪ್ಶನ್​ಗಳು ಸಿಕ್ಕಿತ್ತು. ಅದನ್ನಿಟ್ಟುಕೊಂಡು ತನಿಖೆ ಆರಂಭಿಸಿದಾಗ, ಸುಶಾಂತ್​ ಡಿಪ್ರೆಶನ್​ಗೆ ಒಳಗಾಗಿದ್ದರು ಮತ್ತು ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಇದಕ್ಕಾಗಿಯೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.

ಈ ಪ್ರಕರಣವನ್ನು ತನಿಖೆ ಮಾಡುತ್ತಿರುವ ಪೊಲೀಸರು ಹೇಳುವಂತೆ, ಸುಶಾಂತ್​ಗೆ ಎರಡು ಭಯಂಕರ ಖಾಯಿಲೆಗಳಿದ್ದವಂತೆ. ಒಂದು ಪ್ಯಾರಾನೋಯಾ. ಇನ್ನೊಂದು ಬೈಪೊಲಾರ್​ ಡಿಸ್​ಆರ್ಡರ್​. ಅಷ್ಟೇ ಅಲ್ಲ, ಲಾಕ್​ಡೌನ್​ ಆರಂಭವಾಗುವುದಕ್ಕಿಂದ ಮುಂಚೆ, ಸುಶಾಂತ್​ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರಂತೆ.

ಪ್ಯಾರಾನೋಯಾ ಒಂದು ವಿಚಿತ್ರ ಖಾಯಿಲೆಯಿಂ. ಅದರಿಂದ ಬಳಲುತ್ತಿರುವವರು ಸದಾ ಎಲ್ಲರ ಮೇಲೆ ಅನುಮಾನ ಪಡುತ್ತಾರಂತೆ. ಎಲ್ಲರೂ ತನ್ನನ್ನು ದ್ವೇಷಿಸುತ್ತಿದ್ದಾರೆ, ಎಲ್ಲರೂ ತಮ್ಮ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ ಎಂದು ಅನಿಸುತ್ತದಂತೆ. ಅಷ್ಟೇ ಅಲ್ಲ, ಒಬ್ಬರೇ ಇದ್ದಾಗ, ಯಾರೋ ತಮ್ಮನ್ನು ಕೊಲ್ಲುವುದಕ್ಕೆ ಬರುತ್ತಿದ್ದಾರೆ ಎಂದು ನಂಬುವುದೂ ಉಂಟಂತೆ. ಇನ್ನು ಬೈಪೋಲಾರ್​ ಡಿಸ್​ಆರ್ಡರ್​ನಿಂದ ಬಳಲುತ್ತಿರುವವರ ಮೂಡ್​ ಪದೇಪದೇ ಬದಲಾಗುತ್ತಿರುತ್ತದಂತೆ. ಕೆಲವೊಮ್ಮೆ ವಿಪರೀತ ಸ್ಟ್ರೆಸ್​ನಲ್ಲಿ ಇದ್ದರೆ, ಇನ್ನೂ ಕೆಲವೂ ಅಪರಿಮಿತ ಆತ್ಮವಿಶ್ವಾಸದಿಂದ ಇರುತ್ತಾರಂತೆ. ಆ ನಂತರ, ಯಾರ ಜತೆಗೂ ಮಾತನಾಡದೆ ಹತಾಶರಾಗಿ ಕೂರುತ್ತಾರಂತೆ. ಈ ಖಾಯಿಲೆಗಳಿಂದ ಬಳಲುತ್ತಿರುವವರು ತಮ್ಮನ್ನು ತಾವು ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ, ಯಾವ ಹೊತ್ತಿನಲ್ಲಿ ಯಾವ ತೀರ್ಮಾನ ಬೇಕಾದರೂ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಸುಶಾಂತ್​ ಸಹ ಈ ಎರಡೂ ಖಾಯಿಲೆಗಳಿಂದ ಬಳಲುತ್ತಿದ್ದರಿಂದ, ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ, ಈ ಪ್ರಕರಣದ ಹಿಂದೆ ಬೇರೆ ಯಾವುದೇ ಪಿತೂರಿಗಳಿಲ್ಲ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ ಎನ್ನಲಾಗಿದೆ.

ತನಿಖೆಯಿಂದ ಗೊತ್ತಾಗಿರುವುದೇನೆಂದರೆ, ಸುಶಾಂತ್​ ಅವರ ತಾಯಿ ಸಹ ಡಿಪ್ರೆಶನ್​ನಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net