

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ವಿಚಾರವಾಗಿ ಸಾಕಷ್ಟು ವಿಷಯಗಳು ಬಹಿರಂಗಗೊಳ್ಳುತ್ತಿದ್ದು, ಈಗ ಸುಶಾಂತ್ ಫಾರ್ಮ್ಹೌಸ್ ನೋಡಿಕೊಳ್ಳುತ್ತಿರುವ ರಯೀಸ್ ಎಂಬಾತ ಇನ್ನೊಂದು ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
ಅದೇನೆಂದರೆ, ಸುಶಾಂತ್ ಸಾಯುವುದಕ್ಕಿಂತ ಒಂದು ದಿನದ ಮುಂಚೆ ಅಮರ್, ಅಕ್ಬರ್, ಆಂಟೋನಿ ನೋಡಿಕೊಳ್ಳುವುದಕ್ಕೆ ಒಂದಿಷ್ಟು ಹಣವನ್ನು ಕೊಟ್ಟಿದ್ದರಂತೆ. ಅದಾಗಿ ಮರುದಿನವೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಷ್ಟಕ್ಕೂ ಈ ಅಮರ್, ಅಕ್ಬರ್ ಮತ್ತು ಆಂಟೋನಿ ಯಾರು ಎಂಬ ಪ್ರಶ್ನೆ ಬರಬಹುದು? ಈ ಅಮರ್, ಅಕ್ಬರ್, ಆಂಟೋನಿ ಬೇರ್ಯಾರೂ ಅಲ್ಲ, ಸುಶಾಂತ್ ಅವರ ಮುದ್ದಿನ ನಾಯಿಗಳು. ಸುಶಾಂತ್ ಅವರು ತಮ್ಮ ಲೋನಾವಾಲಾದ ಫಾರ್ಮ್ಹೌಸ್ನಲ್ಲಿ ಈ ನಾಯಿಗಳನ್ನು ಸಾಕಿದ್ದರಂತೆ. ಅವುಗಳನ್ನು ನೋಡುವುದಕ್ಕೆ ಆಗಾಗ ಅಲ್ಲಿಗೆ ಹೋಗುತ್ತಿದ್ದರಂತೆ. ಸಾಯುವುದಕ್ಕೆ ಒಂದು ದಿನ ಮುಂಚೆ, ಆ ನಾಯಿಗಳ ಖರ್ಚಿಗೆಂದು ಅವರು ಒಂದಿಷ್ಟು ಹಣವನ್ನು ಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ರಯೀಸ್, 'ಜೂನ್ 14ರ ಮಧ್ಯಾಹ್ನದಂದು, ಸುಶಾಂತ್ ಅವರು ಆತ್ಮಹತ್ಯೆ ಮಾಡಿಕೊಂಡ ವಿಷಯ ಟಿವಿ ಚಾನಲ್ಗಳಲ್ಲಿ ನೋಡಿ ನಿಜಕ್ಕೂ ಆಘಾತವಾಯಿತು. ಅದಕ್ಕೆ ಒಂದು ದಿನದ ಮುಂಚೆ ಅವರು ತಮ್ಮ ಮುದ್ದು ನಾಯಿಗಳಿಗೆ ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೆ ನನ್ನ ಅಕೌಂಟ್ಗೆ ಹಣವನ್ನು ಹಾಕಿದ್ದರು' ಎಂದು ಹೇಳಿಕೊಂಡಿದ್ದಾರೆ.
ಬರೀ ಅಷ್ಟೇ ಅಲ್ಲ, ಸುಶಾಂತ್ಗೆ ಆ ಫಾರ್ಮ್ಹೌಸ್ಗೆ ಶಿಫ್ಟ್ ಆಗಿ ಅಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಆಸೆಪಟ್ಟಿದ್ದರಂತೆ. ಈ ಕುರಿತು ಮಾತನಾಡಿರುವ ಅವರು, 'ಯೂರೋಪ್ ಟ್ರಿಪ್ಗೆ ಹೋಗುವ ಮುನ್ನ ಸುಶಾಂತ್ ಇಲ್ಲಿಗೆ ಪದೇಪದೇ ಬರುತ್ತಿದ್ದರು. ಯೂರೋಪ್ ಟ್ರಿಪ್ನ ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರು ಇತ್ತ ಕಡೆ ಹೆಚ್ಚು ಬರುತ್ತಿರಲಿಲ್ಲ. ಅವರಿಗೆ ಈ ಫಾರ್ಮ್ ಹೌಸ್ ಖರೀದಿಸಿ, ಇಲ್ಲೇ ನೆಲಗೊಳ್ಳುವ ಆಸೆ ಇತ್ತು' ಎಂದು ರಯೀಸ್ ಹೇಳಿದ್ದಾರೆ.
ಸುಶಾಂತ್ ತಮ್ಮ ಫಾರ್ಮ್ಹೌಸ್ಗೆ ಫೆಬ್ರವರಿಯಲ್ಲಿ ಕೊನೆಯದಾಗಿ ಬಂದಿದ್ದರಂತೆ. ಅದಕ್ಕೂ ಮುನ್ನ ರಿಯಾ ಮತ್ತು ಅವರ ತಂದೆಯ ಹುಟ್ಟುಹಬ್ಬಗಳನ್ನು ಅವರು ಅದೇ ಫಾರ್ಮ್ಹೌಸ್ನಲ್ಲಿ ಆಚರಿಸಿದ್ದರಂತೆ.