ನಿರಂಜನ್​ ಮುಂದಿನ ಸೂಪರ್​ಸ್ಟಾರ್​ .... ಭವಿಷ್ಯ ನುಡಿದ ಶ್ರೀಮುರಳಿ

Superstar - Final
Published on

ಉಪೇಂದ್ರ ಅವರ ಅಣ್ಣನ ಮಗ ನಿರಂಜನ್​ ಸುಧೀಂದ್ರ ಅಭಿನಯದ 'ಸೂಪರ್​ಸ್ಟಾರ್​' ಚಿತ್ರದ ನಾಯಕನ ಇಂಟ್ರೋಡಕ್ಷನ್​ ಟೀಸರ್​ಗೆ 'ರಾಕಿಂಗ್ ಸ್ಟಾರ್​' ಯಶ್​ ಧ್ವನಿಯಾಗಿದ್ದಾರೆ. ಈಗ ಕನ್ನಡ ಚಿತ್ರರಂಗದ ಮತ್ತೊಬ್ಬ ಸ್ಟಾರ್​, ಈ ಚಿತ್ರಕ್ಕೆ ಸಾಥ್​ ನೀಡಿದ್ದಾರೆ.

ಈ ಬಾರಿ, ಸಾಥ್​ ಕೊಟ್ಟಿರುವವರು 'ರೋರಿಂಗ್​ ಸ್ಟಾರ್​' ಶ್ರೀಮುರಳಿ. ಇಂದು ನಿರಂಜನ್​ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ಚಿತ್ರದ ನಾಯಕನ ಇಂಟ್ರೋಡಕ್ಷನ್​ ಟೀಸರ್​ ಬಿಡುಗಡೆ ಮಾಡಿದ ಶ್ರೀಮುರಳಿ, 'ಸೂಪರ್​ಸ್ಟಾರ್​' ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಟೀಸರ್​ ಬಿಡುಗಡೆ ಮಾಡಿ ಮಾತನಾಡಿರುವ ಶ್ರೀಮುರಳಿ, 'ಕೆಲವರು ಸ್ಟಾರ್ ಆಗಿ ಚಿತ್ರರಂಗಕ್ಕೆ ಬಂದರೆ, ನಿರಂಜನ್​ ಸೂಪರ್​ಸ್ಟಾರ್​ ಆಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಅವರಿಗೆ ಶುಭವಾಗಲಿ. ಟೀಸರ್​ ಬಹಳ ಚೆನ್ನಾಗಿ ಬಂದಿದೆ. ಬೇಕಾದರೆ ಬರೆದಿಟ್ಟುಕೊಳ್ಳಿ, ನಿರಂಜನ್​ ಕನ್ನಡ ಚಿತ್ರರಂಗದ ಮುಂದಿನ ಸೂಪರ್​ಸ್ಟಾರ್​ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಟೀಸರ್​ನ ಕೊನೆಯ ಶಾಟ್​ ನೋಡಿದರೆ ಅದು ಗೊತ್ತಾಗುತ್ತದೆ. ಅವರ ಆಟಿಟ್ಯೂಡ್​ ಬಹಳ ಹಿಡಿಸಿತು' ಎಂದು ಶ್ರೀಮುರಳಿ ಹೇಳಿದ್ದಾರೆ.

ನಿರಂಜನ್​ಗೆ ಕಿವಿಮಾತು ಹೇಳಿದ ಶ್ರೀಮುರಳಿ. 'ಚಿತ್ರರಂಗದಲ್ಲಿ ನನ್ನದು 17 ವರ್ಷಗಳ ಅನುಭವ. ಈ ಅನುಭವದಲ್ಲಿ ನಾನು ಎರಡು ವಿಷಯಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಮೊದಲಿಗೆ ಇಲ್ಲಿ ಕಷ್ಟ ಮತ್ತು ಯಶಸ್ಸು ಬಹಳ ಕಾಮನ್​. ಆಗಾಗ ಎರಡೂ ಎದುರಾಗುತ್ತದೆ. ಎದುರಿಸುವ ಶಕ್ತಿ ಇರಬೇಕು. ಇನ್ನು, ಇಲ್ಲಿ ಎಲ್ಲರೂ ಒಳ್ಳೆಯವರೇ. ಯಾರೂ ಕೆಟ್ಟವರಲ್ಲ. ಎಲ್ಲರೂ ಒಳ್ಳೆಯವರು ಎಂಬ ಮನೋಭಾವದಿಂದ ಮುನ್ನೆಡೆ' ಎಂದು ಶ್ರೀಮುರುಳಿ ಕಿವಿ ಮಾತು ಹೇಳಿದರು.

ಇನ್ನು ನಿರಂಜನ್​ಗೆ ಶುಭ ಹಾರೈಸಿದ ಉಪೇಂದ್ರ, 'ಈ ಚಿತ್ರದ ಟೈಟಲ್​ ಕೇಳಿದರೆ ಬಹಳ ಭಯವಾಗುತ್ತದೆ. ಏಕೆಂದರೆ, 'ಸೂಪರ್​ಸ್ಟಾರ್​' ಎಂಬ ದೊಡ್ಡ ಟೈಟಲ್​ ಇಟ್ಟಿದ್ದಾರೆ. ಇದರಿಂದ ನಿರ್ದೇಶಕ ಮತ್ತು ಹೀರೋ ಇಬ್ಬರ ಮೇಲೂ ಜವಾಬ್ದಾರಿ ಜಾಸ್ತಿ. ಜವಾಬ್ದಾರಿ ಜಾಸ್ತಿ ಎಂದು ಗೊತ್ತಿದ್ದೂ ಇಟ್ಟಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಿಯಾಂಕಾ ಉಪೇಂದ್ರ, 'ಬಹದ್ದೂರ್​' ಚೇತನ್​, 'ಅಯೋಗ್ಯ' ಮಹೇಶ್​, ಸೌಂದರ್ಯ ಜಗದೀಶ್​, ಅಲೋಕ್​ ಸೇರಿದಂತೆ ಹಲವರು ಹಾಜರಿದ್ದು, ನಿರಂಜನ್​ ಮತ್ತು ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net