ಪ್ರಭಾಸ್ ‘ಆದಿಪುರುಷ್’ ಸಿನಿಮಾದ ರಾಮನಿಗೆ ಲಕ್ಷ್ಮಣ ಸಿಕ್ಕ

Prabhas
Published on

ಮುಂಬೈ: ಪ್ರಭಾಸ್​ ಅಭಿನಯದ ‘ಆದಿಪುರುಷ್​’ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವುದು ಮುಂದಿನ ವರ್ಷವೇ ಆದರೂ, ಈಗಾಗಲೇ ತೆರೆಮರೆಯಲ್ಲಿ ಕೆಲಸಗಳು ಪ್ರಾರಂಭವಾಗಿದೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೂ ಅಂತಿಮ ಹಂತದಲ್ಲಿದ್ದು, ಇನ್ನೇನು ಆ ಮಾಹಿತಿಯನ್ನೂ ಶೀಘ್ರದಲ್ಲಿ ಹೇಳಿಕೊಳ್ಳಲಿದೆ ತಂಡ. ಸಿನಿಮಾ ಸೆಟ್ಟೇರುವ ಮುನ್ನವೇ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿಕೊಂಡಿತ್ತು. ಇದೀಗ ಇದೇ ಚಿತ್ರದ ಲಕ್ಷ್ಮಣ ಪಾತ್ರಧಾರಿಯ ಆಯ್ಕೆ ಅಂತಿಮವಾಗಿದೆ.

ಪ್ಯಾರ್ ಕಾ ಪಂಚನಾಮಾ, ಸೋನು ಕೇ ಟೀಟು ಕೀ ಸ್ವೀಟಿ ಸಿನಿಮಾ ಖ್ಯಾತಿಯ ಸನ್ನಿ ಸಿಂಗ್​ ಲಕ್ಷ್ಮಣ ಪಾತ್ರದಲ್ಲಿ ನಟಿಸಲಿದ್ದಾರೆ. ರಾಮನಾಗಿ ಪ್ರಭಾಸ್​, ಲಂಕೇಶ್​ ಪಾತ್ರದಲ್ಲಿ ಸೈಫ್​ ಅಲಿಖಾನ್ ನಟಿಸುವುದನ್ನು ತಂಡವೇ ಹೇಳಿಕೊಂಡಿದೆ. ಇದೀಗ ಸನ್ನಿ ಸಿಂಗ್​ ಆಗಮನವನ್ನು ನಿರ್ದೇಶಕ ಓಂ ರಾವತ್ ಖಚಿತಪಡಿಸಿದ್ದಾರೆ.

ಅಂದಹಾಗೆ. ಜನವರಿಯಿಂದ ಆದಿಪುರುಷ್ ಚಿತ್ರದ ಶೂಟಿಂಗ್​ ಆರಂಭವಾಗಲಿದೆ. ಡಿಸೆಂಬರ್​ ಒಳಗೆ ಚಿತ್ರೀಕರಣ ಮುಗಿಸಿಕೊಂಡು, 2022ರ ಆಗಸ್ಟ್ 11ರಂದು ಸಿನಿಮಾ ಬಿಡುಗಡೆ ಆಗಲಿದೆಯೆಂದು ಚಿತ್ರತಂಡವೇ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಿದೆ.

ಶೂಟಿಂಗ್​ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಗ್ರಾಫಿಕ್ಸ್ ಇರಲಿದ್ದು, ಅದಕ್ಕಾಗಿಯೇ ಹೆಚ್ಚಿನ ಸಮಯವನ್ನು ತಂಡ ಮೀಸಲಿಡಬೇಕಿದೆ. ಚಿತ್ರದ ಒಟ್ಟಾರೆ ಬಜೆಟ್​ನಲ್ಲಿ ಅರ್ಧದಷ್ಟು ದುಡ್ಡನ್ನು ಬರೀ ವಿಎಫ್​ಎಕ್ಸ್​ಗೆ ಮೀಸಲಿಡಲಾಗುತ್ತಿದ್ದು, ಈ ಚಿತ್ರ ಯಾವ ಮಟ್ಟಿಗೆ ಮೂಡಿಬರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಹಾಲಿವುಡ್​ ರೇಂಜ್​ನಲ್ಲಿ ಸಿನಿಮಾ ಮೂಡಿಬರಬೇಕು ಎನ್ನುವ ನಿಟ್ಟಿನಲ್ಲಿ ನಿರ್ದೇಶಕ ಓಂ ರೌತ್​, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಎಫ್​ಎಕ್ಸ್​ ತಂತ್ರಜ್ಱರನ್ನು ಈ ಚಿತ್ರಕ್ಕೆ ಕರೆಸುತ್ತಿದ್ದಾರಂತೆ. ಪ್ರಮುಖವಾಗಿ ‘ಗೇಮ್​ ಆಫ್​ ಥ್ರೋನ್ಸ್​’ಗೆ ಕೆಲಸ ಮಾಡಿದ್ದ ತಂತ್ರಜ್ಱರಿಂದ ಈ ಕೆಲಸ ಮಾಡಿಸಲಾಗುತ್ತದಂತೆ. ‘ಆದಿಪುರುಷ್​’ ಚಿತ್ರವು ರಾಮಾಯಣವನ್ನಾಧರಿಸಿದ್ದು, ಈ ಚಿತ್ರವನ್ನು ಟಿ-ಸೀರೀಸ್​ನ ಭೂಷಣ್​ ಕುಮಾರ್​ ನಿರ್ಮಿಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net