ಡಿಂಗರ್ ಬಿಲ್ಲಿ ಬೇಬಿ ಡಾಲ್!; 7 ವರ್ಷಗಳ ಬಳಿಕ ಕನ್ನಡಕ್ಕೆ ಸನ್ನಿ ವಾಪಸ್...

Sunny Leone
Published on

ಬೆಂಗಳೂರು: ಬಾಲಿವುಡ್ ನಟಿ ಸನ್ನಿ ಲಿಯೋನ್ ಏಳು ವರ್ಷಗಳ ಬಳಿಕ ಕನ್ನಡಕ್ಕೆ ವಾಪಸ್ ಆಗಿದ್ದಾರೆ. ಹೌದು, 2015ರಲ್ಲಿ ಬಿಡುಗಡೆಯಾದ ‘ಡಿಕೆ’ ಹಾಗೂ ‘ಲವ್ ಯೂ ಆಲಿಯಾ’ ಚಿತ್ರಗಳ ಬಳಿಕ ಸನ್ನಿ, ಸ್ಯಾಂಡಲ್​ವುಡ್​ಗೆ ಬಂದಿರಲಿಲ್ಲ. ‘ಚಾಂಪಿಯನ್’ ಚಿತ್ರತಂಡವು ಏಳು ವರ್ಷಗಳ ನಂತರ ಅವರನ್ನು ಮತ್ತೆ ಕನ್ನಡಕ್ಕೆ ಕರೆತಂದಿದೆ. ಸಚಿನ್ ಧನಪಾಲ್ ನಾಯಕನಾಗಿರುವ ‘ಚಾಂಪಿಯನ್’ ಚಿತ್ರದಲ್ಲಿ ಸನ್ನಿ ಲಿಯೋನ್ ‘ಡಿಂಗರ್ ಬಿಲ್ಲಿ’ಯಾಗಿ ಸೊಂಟ ಬಳುಕಿಸಿದ್ದಾರೆ. ಹಾಡಿನಲ್ಲಿ ಕುಣಿದಿರುವುದಲ್ಲದೇ ಸನ್ನಿ ಕೊಟ್ಟ ಮಾತಿನಂತೆ ಬೆಂಗಳೂರಿಗೆ ಬಂದು ಚಿತ್ರದ ಹಾಡುಗಳನ್ನು ಖುದ್ದು ತಾವೇ ಬಿಡುಗಡೆ ಕೂಡ ಮಾಡಿದ್ದಾರೆ.

ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಸನ್ನಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಜತೆಗೆ ‘ಡಿಂಗರ್ ಬಿಲ್ಲಿ’ ಹಾಡಿನ ಚಿತ್ರೀಕರಣದ ಬಗ್ಗೆ ಅನುಭವ ಹಂಚಿಕೊಂಡ ಅವರು, ‘ನನ್ನ ಮಕ್ಕಳಿಗೆ ಈ ಹಾಡು ತುಂಬ ಇಷ್ಟ. ಹಲವು ವಾರಗಳ ಕಾಲ ಈ ಹಾಡನ್ನು ಕೇಳಿಕೊಂಡು ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರು’ ಎಂದರು.

ತಮ್ಮ ಸಮಾಜಮುಖಿ ಕೆಲಸಗಳ ಬಗ್ಗೆಯೂ ಮಾತನಾಡಿದ ಅವರು, ‘ಯಾರಾದರೂ ಸಮಸ್ಯೆಯಲ್ಲಿದ್ದಾರೆ ಅಂತ ನನಗೆ ಗೊತ್ತಾದರೆ, ನನ್ನ ಇತಿಮಿತಿಯಲ್ಲಿ ಅವರಿಗೆ ಸಹಾಯ ಮಾಡಲು ಮುಂದಾಗುತ್ತೇನೆ ಅಷ್ಟೇ. ಮಾನವೀಯತೆ ಮುಖ್ಯ’ ಎಂದರು. ಇನ್ನು ಉತ್ತರ ಕರ್ನಾಟಕ ಶೈಲಿಯಲ್ಲಿರುವ ‘ಡಿಂಗರ್ ಬಿಲ್ಲಿ’ ಹಾಡಿಗೆ ‘ಚುಟು ಚುಟು’ ಖ್ಯಾತಿಯ ಶಿವು ಭೇರ್ಗಿ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಮಂಡ್ಯದ ಅಭಿಮಾನಿಗಳಿಗೆ ಧನ್ಯವಾದ: ಇದೇ ಮೇ 13ರಂದು ಸನ್ನಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂ ಡರು. ಅಂದು ಅವರ ಹುಟ್ಟನ್ನು ಮಂಡ್ಯದ ಅಭಿಮಾನಿಗಳು ಹಬ್ಬ ದಂತೆ ಆಚರಿಸಿದ್ದರು. ಆ ವಿಷಯ ತಿಳಿದ ಸನ್ನಿ, ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದರು. ಆಡಿಯೋ ಲಾಂಚ್ ಸಮಯದಲ್ಲೂ ಆ ಬಗ್ಗೆ ಮಾತನಾಡಿದ ಸನ್ನಿ, ‘ನನ್ನ ಹುಟ್ಟುಹಬ್ಬವನ್ನು ರಕ್ತದಾನ ಮಾಡುವ ಮೂಲಕ ಅಭಿಮಾನಿಗಳು ಆಚರಿಸಿದ್ದು ಕೇಳಿ ತುಂಬ ಖುಷಿಯಾಯಿತು. ನಾನೂ ಅತಿ ಶೀಘ್ರದಲ್ಲೇ ರಕ್ತದಾನ ಮಾಡಿ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತೇನೆ’ ಎಂದರು.

ನಾನು ವೆಜ್, ಪ್ರಾಣಿವಧೆ ಪ್ರಚಾರ ಮಾಡಲ್ಲ...: ಇನ್ನು ಮತ್ತೊಬ್ಬ ಸನ್ನಿ ಅಭಿಮಾನಿ ತನ್ನ ಮಟನ್ ಅಂಗಡಿಯಲ್ಲಿ ಸನ್ನಿ ಫೋಟೋ ತೋರಿಸಿದವರಿಗೆ ಡಿಸ್ಕೌಂಟ್ ಕೊಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸನ್ನಿ, ‘ನಾನು ವೆಜ್. ಮಾಂಸಾಹಾರ ತಿನ್ನುವುದಿಲ್ಲ. ಹಾಗೆಯೇ ಪ್ರಾಣಿವಧೆಯನ್ನೂ ಪ್ರಮೋಟ್ ಮಾಡುವುದಿಲ್ಲ. ಆದರೆ, ಅಭಿಮಾನಿ ಆ ರೀತಿ ಮಾಡುತ್ತಿರುವುದಕ್ಕೆ ಧನ್ಯವಾದ’ ಎಂದರು. ತಮ್ಮ ಫಿಟ್ನೆಸ್ ಹಾಗೂ ಬ್ಯೂಟಿ ಸೀಕ್ರೆಟ್​ಅನ್ನೂ ಬಿಚ್ಚಿಟ್ಟ ಅವರು, ‘ನಾನೀಗ ನಿಮ್ಮ ಮುಂದೆಯೇ ಕೇಕ್ ತಿಂದೆ. ಹಾಗೆಯೇ ಎಲ್ಲವನ್ನೂ ತಿನ್ನುತ್ತೇನೆ’ ಎಂದರು.

ಅಭಿಮಾನಿ ಎದೆ ಮೇಲೆ ಸನ್ನಿ ಹಸ್ತಾಕ್ಷರ!: ಇದೇ ಸಂದರ್ಭದಲ್ಲಿ ಸನ್ನಿ ಲಿಯೋನ್ ಅಭಿಮಾನಿ ಚನ್ನಪಟ್ಟಣ ಮೂಲದ ನಂದನ್ ಕುಮಾರ್, ಅವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದರು. ಕಟ್ಟಾಭಿಮಾನಿಯ ಮನವಿಗೆ ಸ್ಪಂದಿಸಿದ ಸನ್ನಿ ಅವರ ಟೀಶರ್ಟ್ ಮೇಲೆ ಹಸ್ತಾಕ್ಷರ ನೀಡಿದರು. ನಂದನ್ ಕುಮಾರ್, ‘ನನ್ನ ಕನಸು ನನಸಾಯಿತು. ಇನ್ನು ಈ ಟೀಶರ್ಟ್ ತೆಗೆಯುವುದೇ ಇಲ್ಲ ...’ ಎಂದು ಸಂಭ್ರಮದಿಂದ ವೇದಿಕೆಯಿಂದ ಕೆಳಗಿಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net