

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನಲ್ಲಿ ನೆಪೋಟಿಸಂನ ಚರ್ಚೆ ಜೋರಾಗಿ ನಡೆಯುತ್ತಿದೆ. ಸ್ಟಾರ್ ಮಕ್ಕಳಿಂದಾಗಿ ಹೊರಗಿನ ಪ್ರತಿಭಾವಂತರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದೆಲ್ಲದರಿಂದ ಹಿರಿಯ ನಟ ಸುನೀಲ್ ಶೆಟ್ಟಿ ಬಹಳ ನೊಂದಿದ್ದಾರಂತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಈ ಇಡೀ ಚರ್ಚೆಯ ಬಗ್ಗೆ ಖಾರವಾಗಿ ಮಾತನಾಡಿದ್ದಾರೆ.
'ನೆಪೋಟಿಸಂ ಕುರಿತಾದ ಚರ್ಚೆ ನೋಡಿ ನೋವಾಗುತ್ತಿದೆ. ಇದು ಚಿತ್ರರಂಗ ಮಾತ್ರ ಅಲ್ಲ, ಎಲ್ಲಾ ಫೀಲ್ಡ್ಗಳಲ್ಲೂ ಇರುವಂತದ್ದೇ. ನಾನು ನಟ ಎಂದ ಮಾತ್ರಕ್ಕೆ ನನ್ನ ಮಗ ಅಥವಾ ಮಗಳು ಈ ಕ್ಷೇತ್ರಕ್ಕೆ ಬರಬೇಕು ಎಂದು ಕನಸು ಕಾಣಬಾರದಾ? ನಾನಿಲಿದ್ದೀನಿ ಅಂತ ನನ್ನ ಮಕ್ಕಳ ಆಸೆ ಬಲಿ ಕೊಡಬೇಕಾ? ಒಬ್ಬ ನಟನ ಮಗ ಅಥವಾ ಮಗಳು, ತಮ್ಮ ತಂದೆಗೆ ಈ ಕ್ಷೇತ್ರದಲ್ಲಿ ಸಿಗುವ ಪ್ರೀತಿ ಮತ್ತು ಅಭಿಮಾನವನ್ನು ಬಹಳ ಹತ್ತಿರದಿಂದ ನೋಡಿರುತ್ತಾರೆ. ತಾನು ಸಹ ತನ್ನ ತಂದೆಯಂತೆಯೇ ಬೆಳೆಯಬೇಕು ಎಂದು ಆಸೆಪಡುತ್ತಾರೆಅದು ತಪ್ಪಾ?' ಎಂದು ಸುನೀಲ್ ಶೆಟ್ಟಿ ಪ್ರಶ್ನಿಸಿದ್ದಾರೆ.
ತಾವು ಹೊಸಬರಿಗೆ ಎಷ್ಟು ಪ್ರೋತ್ಸಾಹಿಸುತ್ತಿದ್ದೀನಿ ಎಂದು ಹೇಳಿರುವ ಸುನೀಲ್ ಶೆಟ್ಟಿ, 'ನಾನು ಆನ್ಲೈನ್ ಟ್ಯಾಲೆಂಟ್ ಹಂಟ್ ನಡೆಸುತ್ತೀನಿ. ಎರಡು ಲಕ್ಷದ 70 ಸಾವಿರ ಮಕ್ಕಳಿಗೆ ವೇದಿಕೆ ಕಲ್ಪಿಸುತ್ತಿದ್ದೇನೆ. ನನ್ನ ಇಬ್ಬರು ಮಕ್ಕಳು ಕೆಲಸಕ್ಕೆ ಪ್ರಯತ್ನಿಸುತ್ತಿದ್ದಾರೆ. ಆ 2.70 ಲಕ್ಷ ಮಕ್ಕಳಿಗೆ ನಾನು ಕೆಲಸ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದನ್ನ್ಯಾಕೆ ಯಾರೂ ಕೇಳುತ್ತಿಲ್ಲ. ಪ್ರತಿಯೊಬ್ಬರಿಗೂ ಕನಸು ಕಾಣುವುದಕ್ಕೆ ಹಕ್ಕಿದೆ. ಸ್ಟಾರ್ ಮಕ್ಕಳೋ ಅಲ್ಲವೋ, ಪ್ರತಿಯೊಬ್ಬರಿಗೂ ಅವರದ್ದೇ ಆದ ಕನಸುಗಳಿರುತ್ತವೆ, ಪ್ರತಿಯೊಬ್ಬರಿಗೆ ಸ್ವಂತ ಐಡೆಂಟಿಟಿ ಇರುತ್ತದೆ. ಈ ಗ್ರೂಪಿಸಂ ಎಲ್ಲಾ ಕಡೆ ಇರುತ್ತದೆ. ಆದರೆ, ಅದೆಲ್ಲದರ ಜತೆಗೆ ಬದುಕುವುದಕ್ಕೆ ನಾವು ಕಲಿಯಬೇಕು ' ಎನ್ನುತ್ತಾರೆ ಸುನೀಲ್ ಶೆಟ್ಟಿ.
ಇನ್ನು ತಮ್ಮ ಬಗ್ಗೆ ಮಾತನಾಡಿಕೊಂಡಿರುವ ಸುನೀಲ್, 'ನನ್ನ ಕೆರಿಯರ್ ಶುರುವಾಗಿದ್ದು 89ರಲ್ಲಿ. ಆದರೆ, ಮೊದಲ ಚಿತ್ರ ಬಿಡುಗಡೆಯಾಗಿದ್ದು 1992ರಲ್ಲಿ. ಮೊದಲ ಸಿನಿಮಾ ಮುಗಿದರೂ ಬಿಡುಗಡೆಯಾಗಲಿಲ್ಲ. ಇನ್ನೊಂದು ಚಿತ್ರದ ಮುಹೂರ್ತವಾದರೂ ಶುರುವಾಗಲಿಲ್ಲ. ಆ ನಂತರ ಶುರುವಾದ ಚಿತ್ರಗಳು ಬಿಡುಗಡೆಯಾದವು. ನನಗೆ ಚಿತ್ರರಂಗದಲ್ಲಿ ಯಾವ ಗಾಡ್ಫಾದರ್ ಇರಲಿಲ್ಲ. ಆದರೂ ದೇವರ ದಯೆಯಿಂದ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದೆ. ಕೆಲವು ವಿಮರ್ಶಕರು ನನ್ನನ್ನ ವುಡನ್ ಎಂದರು. ಅಭಿನಯ ಬಿಟ್ಟು ಹೋಟೆಲ್ ಬ್ಯುಸಿನೆಸ್ನಲ್ಲಿ ತೊಡಗಿಸಿಕೊಳ್ಳುವುದು ವಾಸಿ ಎಂದರು. ನಾನು ಧೃತಿಗೆಡಲಿಲ್ಲ. ಅಭಿನಯದ ಬಗ್ಗೆ ಹೆಚ್ಚು ಗಮನ ಹರಿಸಿದೆ. ಒಬ್ಬ ನಟ ಬೆಳೆಯುವುದು ಮತ್ತು ಬೆಳೆಯಬೇಕಾಗಿರುವುದು ಹೀಗೆ' ಎಂದು ಅವರು ಹೇಳಿಕೊಂಡಿದ್ದಾರೆ.