

ಮುಂಬೈ: ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಮಗಳ ಮೈಕಾಂತಿಯ ವಿಚಾರವಾಗಿ ಟ್ರೋಲ್ಗೆ ಆಹಾರವಾಗಿದ್ದಾರೆ. ಫೇರ್ನೆಸ್ ಕ್ರೀಮ್ ಬಗ್ಗೆ ಜಾಹೀರಾತು ಮಾಡುವ ಮುನ್ನ ಮಗಳ ಮೈಕಾಂತಿಯನ್ನೂ ನೋಡಿ ಎಂದು ನೆಟ್ಟಿಗರು ಶಾರುಖ್ ಖಾನ್ಗೆ ಪ್ರಶ್ನೆ ಮಾಡಿದ್ದಾರೆ.
ಅಷ್ಟಕ್ಕೂ ಈ ರೀತಿಯ ಚರ್ಚೆ ಶುರುವಾಗಲು ಕಾರಣ ಶಾರುಖ್ ಪುತ್ರಿ ಸುಹಾನಾ ಖಾನ್ ಹಾಕಿದ ಫೋಟೋಗಳು. ಹೌದು, ಸೋಷಿಯಲ್ ಮೀಡಿಯಾದಲ್ಲಿ ಸುಹಾನಾ ಫೋಟೋಗಳಿಗೆ ಕಪ್ಪು ಸುಂದರಿ ಎಂಬಂಥ ಕಮೆಂಟ್ಗಳು ಸಂದಾಯವಾಗುತ್ತಿವೆ. ‘ಕಾಲಾ’, ‘ಕಾಳಿ’, ನೀನು ಸುಂದರಿಯಲ್ಲ, ಯಾವಾಗ ಇವಳು ಸುಂದರಿಯಾಗುತ್ತಾಳೆ? ನಿಜಕ್ಕೂ ಆಕೆಯ ಮೈಬಣ್ಣ ತುಂಬ ಕಪ್ಪಾಗಿದೆ ಎಂಬರ್ಥದಲ್ಲಿ ಕಮೆಂಟ್ ಹಾಕುತ್ತಿದ್ದಾರೆ.
ಇದೆಲ್ಲವನ್ನು ಹೇಳಿಕೊಳ್ಳಲು ಸೋಷಿಯಲ್ ಮೀಡಿಯಾದಲ್ಲಿ ವಿವರವಾದ ಪೋಸ್ಟ್ ಹಾಕಿರುವ ಸುಹಾನಾ, ‘ನಾವು ಭಾರತೀಯರು. ಬ್ರೌನ್ ಬಣ್ಣ ಸಹಜ. 5 ಅಡಿ 7 ಇಂಚು ಎತ್ತರ ಮತ್ತು ಅಂದವಾಗಿಲ್ಲ ಇಲ್ಲ ಎಂದ ಮಾತ್ರಕ್ಕೆ ನೀನು ಸುಂದರಿ ಅಲ್ಲ ಎಂಬುದು ಸುಳ್ಳು. ನಾನು 5 ಅಡಿ 3 ಇಂಚು ಎತ್ತರ ಇದ್ದೇನೆ. ನೋಡಲು ಕಪ್ಪಗಿದ್ದೇನೆ. ಆದರೆ, ನಾನು ತುಂಬ ಸಂತೋಷವಾಗಿದ್ದೇನೆ’ ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದೆಲ್ಲ ಒಂದೆಡೆಯಾದರೆ, ಈ ರೀತಿಯ ಪೋಸ್ಟ್ ಹಾಕುತ್ತಿದ್ದಂತೆ, ಒಂದಷ್ಟು ನೆಟ್ಟಿಗರು ನೇರವಾಗಿ ಶಾರುಖ್ ಖಾನ್ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ‘ಮೈಕಾಂತಿ ಹೆಚ್ಚಿಸಿಕೊಳ್ಳುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದನ್ನು ಶಾರುಖ್ ನಿಲ್ಲಿಸಲಿ ಎಂದು ಕೆಲವರು ಪ್ರತಿಕ್ರಿಯಿಸಿದರೆ, ಭಾರತೀಯರ ಮನಸ್ಥಿತಿ ಬದಲಿಸುವ ಮುನ್ನ ನಿಮ್ಮ ತಂದೆಯ ಮನಸ್ಥಿತಿ ಬದಲಿಸಿ. ಅವರನ್ನು ಕೋಟ್ಯಂತರ ಮಂದಿ ಫಾಲೋ ಮಾಡುತ್ತಾರೆ. ಏಕೆಂದರೆ, ಅವರೇ ಈ ಫೇರ್ನೆಸ್ ಕ್ರೀಮ್ ಅನ್ನು ಪ್ರಚುರಪಡಿಸುತ್ತಿದ್ದಾರೆ’ ಎಂದೂ ಹೇಳಿದ್ದಾರೆ. (ಏಜೆನ್ಸೀಸ್)