'ಕಬ್ಜ' ಚಿತ್ರಕ್ಕೆ ಸುದೀಪ್​ ಸೇರ್ಪಡೆ; ಸಂತಸ ಹಂಚಿಕೊಂಡ ಕಿಚ್ಚ ...

Kabzaa - Final
Published on

ಬೆಂಗಳೂರು: ಸುಗ್ಗಿ ಹಬ್ಬ ಸಂಕ್ರಾಂತಿ ಸಮೀಪದಲ್ಲಿದ್ದು, ಆ ಸುದಿನದಂದು‌ ಸರ್​ಪ್ರೈಸ್​ ಕೊಡುವುದಾಗಿ 'ಕಬ್ಜ' ಚಿತ್ರದ ನಿರ್ದೇಶಕ-ನಿರ್ಮಾಪಕ ಆರ್​. ಚಂದ್ರು ಹೇಳಿಕೊಂಡಿದ್ದರು. ಆದರೆ, ಹಬ್ಬಕ್ಕೆ ಎರಡು ದಿನಗಳ ಮುಂಚೆಯೇ ಚಿತ್ರದಲ್ಲಿ ಸುದೀಪ್​ ನಟಿಸುತ್ತಿರುವ ರಹಸ್ಯ ಹೊರಬಿದ್ದಿತ್ತು. ಸುದೀಪ್​ ನಟಿಸುತ್ತಿರುವ ವಿಷಯ ಗೊತ್ತಾದ ಮೇಲೆ ಇನೇನು ಉಳಿದಿದೆ ಎಂದು ಎಲ್ಲರೂ ನಿರಾಸೆಗೊಳಗಾಗುವಷ್ಟರಲ್ಲೇ, ಸುದೀಪ್​ ಅವರ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ ಚಂದ್ರು.

ಗುರುವಾರ ಬೆಳಿಗ್ಗೆ 10 ಗಂಟೆಗೆ ಪ್ರಾಮಿಸ್​ ಮಾಡಿದಂತೆಯೇ, ಚಿತ್ರದಲ್ಲಿ ಸುದೀಪ್​ ನಟಿಸುತ್ತಿರುವ ವಿಷಯವನ್ನು ಒಂದು ಪೋಸ್ಟರ್​ ಮೂಲಕ ಹಂಚಿಕೊಂಡಿದ್ದಾರೆ ಚಂದ್ರು. ಈ ಪೋಸ್ಟರ್​ನಲ್ಲಿ ಸುದೀಪ್​ ಅವರ ಸ್ಕೆಚ್​ ಇದ್ದು, ಇದರಲ್ಲಿ ಅವರು ಭಾರ್ಗವ್​ ಭಕ್ಷಿ ಎಂಬ ಹೆಸರಿನ ಪಾತ್ರ ಮಾಡುತ್ತಿರುವುದಾಗಿ ಹೇಳಲಾಗಿದೆ. ಅಷ್ಟೇ ಅಲ್ಲ, 1947ರಿಂದ 1986ವರೆಗಿನ ಕಾಲಘಟ್ಟದ ಭಕ್ಷಿ, ಮಾಫಿಯಾ ಮುಗಿಸಲು ಹೋರಾಡುತ್ತಾನೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಸುದೀಪ್​ ಸಹ ಖುಷಿ ವ್ಯಕ್ತಪಡಿಸಿದ್ದಾರೆ.

ಉಪೇಂದ್ರ ಅಭಿನಯದ 'ಕಬ್ಜ' ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ಚಿತ್ರ ಬಿಡುಗಡೆಗೆ ಸಿದ್ಧವಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ವಿಳಂಬವಾಗಿದೆ. ಇದೀಗ ಚಿತ್ರತಂಡಕ್ಕೆ ಸುದೀಪ್​ ಅವರ ಆಗಮನದಿಂದ ಇನ್ನಷ್ಟು ಜೋಶ್​ ಬಂದಿದ್ದು, ಜನವರಿ ಕೊನೆಯ ವಾರದಿಂದ ಇನ್ನೊಂದು ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.

ಉಪೇಂದ್ರ ಮತ್ತು ಸುದೀಪ್​ ಇದೇ ಎರಡನೇ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ ಇಬ್ಬರೂ 'ಮುಕುಂದ ಮುರಾರಿ' ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಇದೀಗ 'ಕಬ್ಜ' ಚಿತ್ರದಲ್ಲಿ ಇಬ್ಬರೂ ಜತೆಯಾಗಿದ್ದಾರೆ. ಚಿತ್ರದ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದ್ದು, ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್,ಕೋಟ ಶ್ರೀನಿವಾಸ ರಾವ್ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಮತ್ತು ಎ.ಜೆ.ಶೆಟ್ಟಿ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net