

ಹೈದರಾಬಾದ್: 'ಕೆಜಿಎಫ್ 2' ಚಿತ್ರದ ಚಿತ್ರೀಕರಣ ಮುಗಿಸಿರುವ ಪ್ರಶಾಂತ್ ನೀಲ್, ಇದೀಗ 'ಸಲಾರ್' ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಹೈದರಾಬಾದ್ನಲ್ಲಿ ಬೀಡುಬಿಟ್ಟಿರುವ ಅವರು, ಚಿತ್ರಕ್ಕೆ ಬೇಕಾದ ಲೊಕೇಶನ್ಗಳನ್ನು ಹುಡುಕುವುದರಲ್ಲಿ ನಿರತರಾಗಿದ್ದಾರಂತೆ.
ಈ ಮಧ್ಯೆ, ಚಿತ್ರದ ಕುರಿತಾಗಿ ಒಂದು ಮಹತ್ವದ ವಿಷಯ ಹೊರಬಿದ್ದಿದೆ. ಅದೇನೆಂದರೆ, ಚಿತ್ರದ ಚಿತ್ರೀಕರಣವನ್ನು ಕೇವಲ 45 ದಿನಗಳಲ್ಲಿ ಮುಗಿಸುವುದಕ್ಕೆ ಪ್ರಶಾಂತ್ ನೀಲ್ ನಿರ್ಧರಿಸಿದ್ದಾರಂತೆ. ಈ ಕುರಿತು ಅವರ ಕಡೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬೀಳದಿದ್ದರೂ, ಚಿತ್ರವನ್ನು 45 ದಿನಗಳಲ್ಲಿ ಮುಗಿಸುವುದಕ್ಕೆ ಅವರು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಶಾಂತ್ ನೀಲ್ ಚಿತ್ರಗಳ ಚಿತ್ರೀಕರಣ ಸಾಮಾನ್ಯವಾಗಿ ಹೆಚ್ಚು ಸಮಯ ಬೇಕಾಗುತ್ತದೆ. ಈ ಹಿಂದೆ, 'ಉಗ್ರಂ' ಚಿತ್ರವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದ್ದರಿಂದ, ಅದನ್ನು ಮುಗಿಸುವುದಕ್ಕೆ ಪ್ರಶಾಂತ್ಗೆ ನಾಲ್ಕು ವರ್ಷಗಳು ಬೇಕಾದವು. ಆ ನಂತರ 'ಕೆಜಿಎಫ್' ಮತ್ತು 'ಕೆಜಿಎಫ್ 2' ಚಿತ್ರಗಳಿಗೆ ಪ್ರಶಾಂತ್ ಐದು ವರ್ಷಗಳನ್ನು ವ್ಯಯಿಸಿದ್ದಾರೆ. ಹೀಗಿರುವಾಗ, 'ಸಲಾರ್' ಚಿತ್ರವನ್ನು ಅಷ್ಟು ಕಡಿಮೆ ಸಮಯದಲ್ಲಿ ಅವರಿಗೆ ಮುಗಿಸುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆ ಹಲವರಲ್ಲಿದೆ.
ಇನ್ನು, 'ಸಲಾರ್' ಚಿತ್ರದ ಚಿತ್ರೀಕರಣವು ಫೆಬ್ರವರಿ ಮೊದಲ ವಾರದಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ನಟ ಪ್ರಭಾಸ್ ಸದ್ಯ 'ರಾಧೇ ಶ್ಯಾಮ್' ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೈದರಾಬಾದ್ನಲ್ಲಿ ಚಿತ್ರದ ಪ್ರಮುಖ ದೃಶ್ಯಗಳು ಮತ್ತು ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಅದು ಮುಗಿಯುತ್ತಿದ್ದಂತೆಯೇ 'ಸಲಾರ್' ಚಿತ್ರದ ಚಿತ್ರೀಕರಣಕ್ಕೆ ಪ್ರಭಾಸ್ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.