18 ರಾಷ್ಟ್ರಗಳ ಅಭಿಮಾನಿಗಳ ಜತೆ ‘ಕಿಚ್ಚ’ ಸುದೀಪ್ ನೇರ ಮಾತುಕತೆ!

collage (4)
Published on

ಲಾಕ್ ಡೌನ್ ನಂತರ ವಿಶ್ವದೆಲ್ಲೆಡೆಯ ಸ್ನೇಹಿತರ ಜತೆಗೆ ಆನ್ಲೈನ್ ನಲ್ಲಿ ಸಂವಾದ ನಡೆಸುತ್ತಿರುವ ಕಿಚ್ಚ ಸುದೀಪ್, ಇದರ ಭಾಗವಾಗಿ ಸಾಗರದಾಚೆಯ ಕನ್ನಡಿಗರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸಿನಿ ಬದುಕು, ತಮ್ಮ ಮೆಚ್ಚಿನ ಹವ್ಯಾಸಗಳು, ಕರೊನಾ ಹಾವಳಿ, ಲಾಕ್ ಡೌನ್ ನಲ್ಲಿನ ದಿನಚರಿ ಹೀಗೆ ಹತ್ತು ಹಲವು ವಿಷಯಗಳ ಕುರಿತು ಅಭಿಮಾನಿಗಳ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಈ ಸಂವಾದದಲ್ಲಿ ಉತ್ತರಿಸಲಿದ್ದಾರೆ.

ಇದೇ ಜೂನ್ 13ರಂದು ಯುಕೆ ಮತ್ತು ಯುರೋಪ್ ಸೇರಿ ಸುಮಾರು 18 ರಾಷ್ಟ್ರಗಳ ಅಭಿಮಾನಿಗಳನ್ನು ಆನ್​ಲೈನ್​ನಲ್ಲಿ ಭೇಟಿಯಾಗಲು ಸಿದ್ಧರಾಗುತ್ತಿದ್ದಾರೆ. ಇದೊಂದು ವಿಶಿಷ್ಟ ಪ್ರಯತ್ನವಾಗಿದ್ದು, ಈ ಮಾತುಕತೆಯಲ್ಲಿ ಸಾವಿರಾರು ಕಿಚ್ಚನ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ ಕಳೆದ ಶನಿವಾರ ಯುಎಸ್‍ಎ ಮತ್ತು ಕೆನಡಾದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ನಡೆಸಿದ್ದ ಆನ್‍ಲೈನ್ ಸಂವಾದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಹೀಗಾಗಿ ಈ ಬಾರಿ ಹದಿನೆಂಟು ರಾಷ್ಟ್ರಗಳ ಕನ್ನಡಿಗರು ಈ ಸಂವಾದದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.

ನನ್ನ ಪಯಣ ಎಂಬ ಥೀಮ್ ಇಟ್ಟುಕೊಂಡಿರುವ ಈ ಆನ್‍ಲೈನ್ ಭೇಟಿಯನ್ನು ಕನ್ನಡ ಬಳಗ ಯುಕೆ ಆಯೋಜಿಸಿದ್ದು, ಜೂನ್ 13ರಂದು ಲಂಡನ್ ಕಾಲಮಾನ ಮಧ್ಯಾಹ್ನ 3.30ಕ್ಕೆ, ಭಾರತೀಯ ಕಾಲಮಾನ ರಾತ್ರಿ 8ಕ್ಕೆ, ಆಮ್ಸ್ಟರ್ ಡ್ಯಾಮ್ ನಲ್ಲಿ ಸಂಜೆ 4.30 ಹಾಗೂ ನ್ಯೂಯಾರ್ಕ್‍ನಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net