

ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರದ ಚಿತ್ರೀಕರಣ ಈ ವರ್ಷದ ಆರಂಭದಲ್ಲೇ ಮುಗಿದಿತ್ತು. ಏಪ್ರಿಲ್-ಮೇ ಹೊತ್ತಿಗೆ ಚಿತ್ರ ಬಿಡಗುಡೆಯಾಗುತ್ತದೆ ಎಂದು ಸಹ ಹೇಳಲಾಗಿತ್ತು. ಆದರೆ, ಅಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ, ಚಿತ್ರದ ಕೆಲಸಗಳೆಲ್ಲಾ ನಿಂತವು.
ಈಗ ಲಾಕ್ಡೌನ್ ತೆರವಾಗಿ, ಚಿತ್ರ ಚಟುವಟಿಕೆಗಳು ಶುರುವಾಗಿದೆ. ಬರೀ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿರುವುದಷ್ಟೇ ಅಲ್ಲ, ಚಿತ್ರೀಕರಣ ಸಹ ಶುರುವಾಗಿದ್ದು, ಸುದೀಪ್ ಸಹ 'ಫ್ಯಾಂಟಮ್' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಮೂಲಕ, ಚಿತ್ರೀಕರಣದಲ್ಲಿ ಪಾಲ್ಗೊಂಡ ಮೊದಲ ದೊಡ್ಡ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಲ್ಲಾ ಸರಿ, ಈ ಮಧ್ಯೆ, 'ಕೋಟಿಗೊಬ್ಬ 3' ಚಿತ್ರದ ಕಥೆ ಏನು ಎಂಬ ಪ್ರಶ್ನೆ ಬರುವುದು ಸಹಜ. ಚಿತ್ರದ ಚಿತ್ರೀಕರಣವೇನೋ ಮುಗಿದಿದೆ. ಇನ್ನು ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅಷ್ಟೇ ಅಲ್ಲ, ಚಿತ್ರತಂಡದವರ್ಯಾರೂ ಚಿತ್ರದ ಬಗ್ಗೆ ತುಟಿಕ್ ಪಿಟಿಕ್ ಅನ್ನುತ್ತಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, 'ಬಹಳಷ್ಟು ಜನ 'ಕೋಟಿಗೊಬ್ಬ 3' ಕುರಿತು ಏನಾದರೂ ಅಪ್ಡೇಟ್ ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಸಹ ಬಹುತೇಕ ಮುಗಿದಿದೆ. ಈ ಮಧ್ಯೆ ಲಾಕ್ಡೌನ್ ಆಗಿರುವುದರಿಂದ, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಉಳಿದಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ, ಚಿತ್ರ ಬಿಡುಗಡೆ ಮಾಡುತ್ತೇವೆ' ಎಂದು ಸುದೀಪ್ ಹೇಳಿಕೊಂಡಿದ್ದಾರೆ.