ಸುದೀಪ್ ರೀಲೋಡೆಡ್!; 25ರ ಹುಮ್ಮಸ್ಸಿನಲ್ಲಿ ಮತ್ತಷ್ಟು ಮಾತು...

Sudeep
Published on

ಬೆಂಗಳೂರು: ‘ನಿಜ ಹೇಳಬೇಕೆಂದ್ರೆ, ನನ್ನ ಕಟೌಟ್ ನೋಡಿ ನನಗೆ ಅಷ್ಟೇನೂ ಅನಿಸಲಿಲ್ಲ. ಆದರೆ, ಅಲ್ಲಿ ನಮ್ಮ ಕನ್ನಡ ಬಾವುಟ ನೋಡಿದಾಗ, ಕೆಲವು ಕ್ಷಣಗಳ ಕಾಲ ಮ್ಯೂಟ್ ಆಗಿ ಹೋದೆ. ಆಗ ಆದ ರೋಮಾಂಚನ ಹೇಳಿಕೊಳ್ಳುವುದಕ್ಕೆ ಸಾಧ್ಯವಿಲ್ಲ ...’

ಇಷ್ಟು ಹೇಳಿ ಒಂದು ಕ್ಷಣ ಮೌನವಾದರು ಸುದೀಪ್. ಕಳೆದ ಭಾನುವಾರವಷ್ಟೇ (ಜ.31) ಬುರ್ಜ್ ಖಲೀಫಾ ಮೇಲೆ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದ ಟೈಟಲ್ ಲೋಗೋ ಬಿಡುಗಡೆಯಾಯಿತು. ಅದಾಗಿ ಒಂದು ವಾರದ ನಂತರ ಅಂದರೆ ಮೊನ್ನೆ ಭಾನುವಾರ (ಫೆ.7) ಮತ್ತೆ ಮಾಧ್ಯಮದವರೆದುರು ಬಂದರು. ತಮ್ಮ 25 ವರ್ಷಗಳ ಸುದೀರ್ಘ ಪಯಣದಲ್ಲಿ ಜತೆಯಾದ ಮಾಧ್ಯಮದವರಿಗೆ ಸುದೀಪ್ ಥ್ಯಾಂಕ್ಸ್ ಹೇಳಿದರು.

ಕೆಲವು ತಪ್ಪುಗಳನ್ನು ಮಾಡಿದ್ದೇನೆ: ಜನವರಿ 31, 1996ರಂದು ಪ್ರಾರಂಭವಾದ ನನ್ನ ಜರ್ನಿ ಇಲ್ಲಿಯವರೆಗೂ ಮುಂದುವರೆದಿದೆ. ನನ್ನ ಈ ಪಯಣದಲ್ಲಿ ಕೆಲವು ತಪು್ಪಗಳನ್ನು ಮಾಡಿದ್ದೇನೆ. ಕೆಲವರು ಸೂಕ್ಷ್ಮವಾಗಿ ನನ್ನನ್ನು ತಿದ್ದಿದ್ದಾರೆ. ಈ ಸಂಬಂಧ ಬೇರೆ ತರಹ. ಗಂಡ-ಹೆಂಡತಿ ಜಗಳಗಳೂ ಆಗಿವೆ. ಕೋರ್ಟ್​ಗೂ ಹೋಗಿದ್ದೇವೆ. ವಾಪಸ್ಸೂ ಬಂದಿದ್ದೇವೆ. ಅಷ್ಟಾದರೂ, ಇಷ್ಟು ವರ್ಷಗಳ ನಂತರವೂ ಒಬ್ಬರನ್ನೊಬ್ಬರು ನೋಡಿ ಸ್ಮೈಲ್ ಬರುತ್ತದೆ ಎಂದರೆ, ನಾವು ಪ್ರಾಮಾಣಿಕರಾಗಿದ್ದೇವೆ ಎಂದರ್ಥ.

2020 ನನ್ನ ಜೀವನದ ಬೆಸ್ಟ್ ವರ್ಷ: ಲಾಕ್​ಡೌನ್ ಸಂದರ್ಭದಲ್ಲಿ ಜೀವನದ ಬೆಲೆ ಗೊತ್ತಾಯಿತು. ಕೆಲವರ ಪಾಲಿಗೆ ಅದು ಕೆಟ್ಟ ವರ್ಷ ಆಗಿತ್ತು ಎನ್ನುವುದು ನಿಜ. ನನ್ನ ಪ್ರಕಾರ, 2020ರಿಂದ 20 ಪರ್ಸೆಂಟ್ ಜನ ಬದಲಾದರೆ ಜಗತ್ತು ಇನ್ನಷ್ಟು ಚೆನ್ನಾಗಿರುತ್ತದೆ. ನನಗಂತೂ 2020 ಬಹಳ ಖುಷಿ ಕೊಟ್ಟಿತು. ಅದರಿಂದ ಯಾರಿಗೆ ಕೆಟ್ಟದಾಯಿತೋ ಗೊತ್ತಿಲ್ಲ, ನಾನಂತೂ ತುಂಬಾ ಕಲಿತೆ. ಈ ಸಮಯದಲ್ಲಿ ತುಂಬಾ ಯೋಚಿಸಿದೆ. ಆರಾಮವಾಗಿದ್ದೆ. ಕಥೆ ಬರೆದೆ, ಅಡುಗೆ ಮಾಡಿದೆ, ಗಿಡಗಳ ಜತೆ ಮಾತಾಡಿದೆ, ನಾಯಿಮರಿಗಳ ಹತ್ತಿರ ಮಾತಾಡಿದೆ, ಅಂತಾಕ್ಷರಿ ಆಡಿದೆ, ಮಿಮಿಕ್ರಿ ಮಾಡಿದೆ ... ಒಟ್ಟಿನಲ್ಲಿ ತುಂಬ ರಿಲ್ಯಾಕ್ಸ್ ಆದಂತಾಯಿತು. ಜನ ಹೊರಗೆ ಸಾಕಷ್ಟು ಕಷ್ಟಪಡುತ್ತಿದ್ದರು. ನನ್ನ ಕೈಯಲ್ಲಿ ಏನು ಸಾಧ್ಯವೋ ಅದನ್ನೆಲ್ಲಾ ಮಾಡಿದ್ದೇನೆ. ಒಟ್ಟಾರೆ, ಅದು ನನ್ನ ಬೆಸ್ಟ್ ಸಮಯ ಎಂದರೆ ತಪ್ಪಿಲ್ಲ.

ಬೇರೆಯವರ ಕನಸುಗಳಲ್ಲಿ ಭಾಗಿ: ನಿರ್ದೇಶನ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದಾರೆ. ನನಗೂ ನಿರ್ದೇಶನ ಮಾಡುವ ಪ್ಲಾನ್ ಇತ್ತು. ಆದರೆ, ತುಂಬ ಜನ ನಿರ್ದೇಶಕರು ನನಗೆ ಕಥೆ ಬರೆಯುತ್ತಿದ್ದಾರೆ ಅಂತ ನನಗೆ ಗೊತ್ತಿರಲಿಲ್ಲ. ಅದು ಗೊತ್ತಾಗಿದ್ದು ಈ ಚಿತ್ರದ ಸಂದರ್ಭದಲ್ಲಿ. ಬರೀ ಕನ್ನಡದವರಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿ ... ತುಂಬ ಜನ ಕಥೆ ತೆಗೆದುಕೊಂಡು ಬಂದಿದ್ದಾರೆ. ಅದೊಂದು ಅದ್ಭುತ ಫೀಲಿಂಗ್. ನಿಮ್ಮನ್ನು ತಲೆಯಲ್ಲಿಟ್ಟುಕೊಂಡು ಹಲವರು ಕಥೆ ಬರೆಯುತ್ತಿದ್ದಾರೆ ಎನ್ನುವುದು ಖುಷಿಯ ವಿಷಯ. ಹಾಗಾಗಿ ಒಂದಿಷ್ಟು ಚಿತ್ರಗಳಲ್ಲಿ ನಟಿಸುವಾಸೆ. ಹಾಗಂತ ನಿರ್ದೇಶನ ಮಾಡಬಾರದು ಅಂತಲ್ಲ, ಅವಶ್ಯಕತೆ ಬಂದರೆ ಮಾಡುತ್ತೀನಿ. ಆದರೆ, ಸದ್ಯಕ್ಕೆ ಅವರು ಕನಸುಗಳಲ್ಲಿ ಭಾಗಿಯಾಗುವುದಕ್ಕೆ ಇಷ್ಟಪಡುತ್ತೇನೆ.

ಬೇರೆಯವರ ಸಲಹೆ ನನಗ್ಯಾಕೆ?

ನಾನು ಯಾರ ಸಲಹೆಯನ್ನೂ ಕೇಳುವುದಿಲ್ಲ. ಎಲ್ಲರೂ ಜೀವನದಲ್ಲಿ ತಪು್ಪ ಮಾಡುತ್ತಾರೆ. ಅವರ ಸಲಹೆಯನ್ನು ನಾನ್ಯಾಕೆ ತೆಗೆದುಕೊಳ್ಳಬೇಕು. ಹೇಳುತ್ತಿರುತ್ತಾರೆ, ನಾವು ಕೇಳಿಸಿಕೊಂಡು ಹೋಗಬೇಕು. ಯಾರಾದರೂ ಪ್ರೋತ್ಸಾಹ ಮಾಡಿದರೆ, ಚೆನ್ನಾಗಿ ಕೆಲಸ ಮಾಡುತ್ತೇನೆ. ಯಾರಾದರೂ ಇರಿಟೇಟ್ ಮಾಡಿದರೆ ಇನ್ನೂ ಚೆನ್ನಾಗಿ ಕೆಲಸ ಮಾಡುತ್ತೇನೆ. ಯಾರಾದರೂ ಕೆರಳಿಸಿದರೆ ಮತ್ತಷ್ಟು ಚೆನ್ನಾಗಿ ಕೆಲಸ ಮಾಡುತ್ತೇನೆ.

ದೇವರು ಕೊಟ್ಟ ಕಾಲು

ಆರಂಭದಲ್ಲಿ ಕೆಲವರು ನನ್ನನ್ನು ಐರನ್ ಲೆಗ್ ಎಂದರು. ಕೆಲವರು ನನ್ನ ಯಶಸ್ಸು ಫ್ಲೂಕ್ ಎಂದರು. ಅದು ಅವರವರ ದೃಷ್ಟಿಕೋನ. ಐರನ್ ಲೆಗ್ ಎಂದರೆ ಬಹಳ ಸ್ಟ್ರಾಂಗ್ ಲೆಗ್, ಒದ್ದರೆ ಬದುಕಲ್ಲ ಅಂತ ಅರ್ಥ. ಆ ಅರ್ಥವನ್ನು ಬಿಟ್ಟು, ಜನ ಐರಲ್ ಲೆಗ್ ಎಂದರೆ ದುರದೃಷ್ಟ ಅಂತ ಅರ್ಥ ಕಲ್ಪಿಸಿಕೊಂಡಿದ್ದಾರೆ. ನಾನು ಐರನ್ ಲೆಗ್ಗೇ. ಇತ್ತೀಚೆಗೆ ಏನಾಗಿದೆಯೆಂದರೆ, ಸ್ನೇಹಿತರ ಬಳಿ ದುಡ್ಡು ಜಾಸ್ತಿಯಾಗಿದೆ, ಅದಕ್ಕೆ ಕೆಲವರು ಗೋಲ್ಡು-ಗೀಲ್ಡು ಅಂತಾರೆ. ನಿಜ ಹೇಳಬೇಕೆಂದರೆ, ಅದು ಐರನ್ ಲೆಗ್ಗೂ ಅಲ್ಲ, ಗೋಲ್ಡನ್ ಲೆಗ್ಗೂ ಅಲ್ಲ. ಅದು ದೇವರು ಕೊಟ್ಟ ಎರಡು ಕಾಲು. ನಿಂತ್ಕೋ ಅಂತ ತಂದೆ-ತಾಯಿ ಹೇಳಿದರು, ನಿಂತಿದ್ದೀನಿ ಅಷ್ಟೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net