

ಬೆಂಗಳೂರು: "ಮುಂದುವರಿದ ಅಧ್ಯಾಯ" ಚಿತ್ರದ ಸುದ್ದಿಗೋಷ್ಠಿಯಲ್ಲಿ ಪ್ರಸಾರವಾದ ವಿಡಿಯೋವೊಂದರಲ್ಲಿ ನಿರ್ದೇಶಕರ ಪಟ್ಟಿಯಿಂದ ನಟ ಸುದೀಪ್ ಫೋಟೋ ಬಿಟ್ಟ ವಿಚಾರವಾಗಿ ಸೃಷ್ಟಿಯಾದ ವಿವಾದದ ಬೆನ್ನಲ್ಲೇ ಡೆಡ್ಲಿಸೋಮ ಖ್ಯಾತಿಯ ನಟ ಆದಿತ್ಯ ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದಾರೆ.
ಟ್ವೀಟ್ ಮೂಲಕ 'ಮಾಧ್ಯಮ ಮಾಫಿಯಾ' ಎಂದು ಕರೆದಿರುವ ನಟ ಆದಿತ್ಯ, ಸ್ನೇಹಿತರ ನಡುವೆ ಬೇಡವಾದ ವಿವಾದಗಳನ್ನು ಹುಟ್ಟುಹಾಕಿ ತಮಾಷೆ ನೋಡುತ್ತಿದ್ದಾರೆ. ಘಟನೆಗಳನ್ನು ಜನರಿಗೆ ಕಹಿಯಾಗಿ ತೋರಿಸಿ, ಒಳ್ಳೆಯದನ್ನು ಹೇಳುವ ಬದಲಾಗಿ ದ್ವೇಷವನ್ನು ಹರಡಿಸುವುದನ್ನು ನಿಲ್ಲಿಸಿ, ನನ್ನ ಸಿನಿಮಾ ಟ್ರೈಲರ್ನಲ್ಲಿ ಬೇಡವಾದ ವಿಷಯವೊಂದನ್ನು ಪತ್ತೆಹಚ್ಚಿ, ಕೆಳಮಟ್ಟದ ವಿವಾದವನ್ನು ಸೃಷ್ಟಿಸಲಾಗಿದೆ. ಸ್ನೇಹಿತರ ನಡುವೆ ತಂದಿಡುವುದನ್ನು ನಿಲ್ಲಿಸಿ ಎಂದು ಹರಿಹಾಯ್ದಿದ್ದಾರೆ.
ಅಂದಹಾಗೆ ನಿನ್ನೆ ಮುಂದುವರಿದ ಅಧ್ಯಾಯ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಿನಿಮಾರಂಗದ ನಿರ್ದೇಶಕರ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ಅದರಲ್ಲಿ ಹಿಂದಿನ ನಿರ್ದೇಶಕರರಾದ ವೈ.ವಿ.ರಾವ್ರಿಂದ ಹಿಡಿದು ಇತ್ತೀಚಿನ ಪ್ರಶಾಂತ್ ನೀಲ್ವರೆಗೂ ಚಿತ್ರತಂಡ ಧನ್ಯವಾದ ಹೇಳಿತು. ಆದರೆ, ವಿಡಿಯೋದಲ್ಲಿ ಸುದೀಪ್ ಅವರ ಸುಳಿವೇ ಇರಲಿಲ್ಲ. ಹೀಗಾಗಿ ಈ ವಿಚಾರ ಇದೀಗ ತೀವ್ರ ವಿವಾದ ಹುಟ್ಟುಹಾಕಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ದರ್ಶನ್ ಬಂದಿದ್ದರಿಂದ ಬೇಕಂತಲೇ ಸುದೀಪ್ ಫೋಟೋವನ್ನು ಬಿಡಲಾಗಿದೆ ಎಂಬ ವಾದ ನಡೆಯುತ್ತಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಆದಿತ್ಯ ಕೂಡ ನೋ ಕಮೆಂಟ್ಸ್ ಎಂದಿದ್ದರು. ಇದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ವಾಕ್ಸಮರ ನಡೆಯುತ್ತಿದ್ದು, ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್)