

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಬಣ ರಾಜಕಾರಣ ನಡೆಯುತ್ತಿದೆಯಾ ಎಂಬ ಪ್ರಶ್ನೆ ಮತ್ತೊಮ್ಮೆ ಉದ್ಭವವಾಗಿದೆ. ಅದಕ್ಕೆ ಕಾರಣವಾಗಿದ್ದು, ನಟ ಆದಿತ್ಯ ಅಭಿನಯದ ನೂತನ "ಮುಂದುವರಿದ ಅಧ್ಯಾಯ" ಸಿನಿಮಾದ ಸುದ್ದಿಗೋಷ್ಠಿ.
ಇದಕ್ಕೂ ಮುಂಚೆ ದರ್ಶನ್ ಮತ್ತು ಸುದೀಪ್ ಸ್ನೇಹವನ್ನು ಇಲ್ಲಿ ಪ್ರಸ್ತಾಪ ಮಾಡಲೇ ಬೇಕು. ಒಂದು ಕಾಲದಲ್ಲಿ ಕಿಚ್ಚ-ದಚ್ಚು ಕುಚುಕು ಗೆಳೆಯರಾಗಿದ್ದರು. ಎಲ್ಲಿಗೆ ಹೋಗಬೇಕಾದರೂ ಒಟ್ಟಿಗೆ ಹೋಗುತ್ತಿದ್ದರು. ಇವರ ಸ್ನೇಹ ಅಭಿಮಾನಿಗಳಲ್ಲಿ ಸಂತಸ ಅಲೆಯನ್ನು ಸೃಷ್ಟಿಮಾಡಿತ್ತು. ಅಂಬರೀಷ್ ಮತ್ತು ವಿಷ್ಣುವರ್ಧನ್ ಬಿಟ್ಟರೆ ಸ್ಯಾಂಡಲ್ವುಡ್ ದಿಗ್ಗಜರು ದಚ್ಚು-ಕಿಚ್ಚ ಎನ್ನುವಷ್ಟರ ಮಟ್ಟಿಗೆ ಇತ್ತು.
ಏನಾಯಿತೋ ಕಾಣೆ ಒಂದು ದಿನ ದರ್ಶನ್ ಟ್ವೀಟ್ ಮೂಲಕ "ಇನ್ನು ಮುಂದೆ ನಾನು ಮತ್ತು ಸುದೀಪ್ ಸ್ನೇಹಿತರಲ್ಲ. ಚಿತ್ರರಂಗಕ್ಕೆ ದುಡಿಯುವ ಕಲಾವಿದರಷ್ಟೇ" ಎಂದು ಕಡ್ಡಿ ತುಂಡು ಮುರಿದಂಗೆ ಹೇಳಿದ್ದರು. ಸ್ನೇಹದ ಬಿರುಕಿನ ಬಗ್ಗೆ ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡಿದರೂ ಇಂದಿಗೂ ಅಸಲಿ ಕಾರಣ ಏನೆಂಬುದು ರಹಸ್ಯವಾಗಿಯೇ ಇದೆ. ಇದೀಗ ಇಬ್ಬರು ಉತ್ತರ-ದಕ್ಷಿಣದಂತಿದ್ದಾರೆ.
ಇದೀಗ ಅಸಲಿ ವಿಚಾರಕ್ಕೆ ಬಂದರೆ ನಿನ್ನೆ ಡೆಡ್ಲಿ ಸೋಮ ಚಿತ್ರ ಖ್ಯಾತಿಯ ನಟ ಆದಿತ್ಯ ಅಭಿನಯದ ನೂತನ "ಮುಂದುವರಿದ ಅಧ್ಯಾಯ" ಚಿತ್ರದ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು. ಈ ವೇಳೆ ನಟ ಸುದೀಪ್ಗೆ ಅವಮಾನ ಮಾಡಲಾಗಿದೆ ಎಂಬ ಚರ್ಚೆ ಇದೀಗ ಎಲ್ಲೆಡೆ ನಡೆಯುತ್ತಿದೆ.
ಅಷ್ಟಕ್ಕೂ ಏನಾಯಿತೆಂದರೆ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಿನಿಮಾರಂಗದ ನಿರ್ದೇಶಕರ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ಅದರಲ್ಲಿ ಹಿಂದಿನ ನಿರ್ದೇಶಕರರಾದ ವೈ.ವಿ.ರಾವ್ರಿಂದ ಹಿಡಿದು ಇತ್ತೀಚಿನ ಪ್ರಶಾಂತ್ ನೀಲ್ವರೆಗೂ ಚಿತ್ರತಂಡ ಧನ್ಯವಾದ ಹೇಳಿತು. ಆದರೆ, ವಿಡಿಯೋದಲ್ಲಿ ಸುದೀಪ್ ಅವರ ಸುಳಿವೇ ಇರಲಿಲ್ಲ. ಹೀಗಾಗಿ ಈ ವಿಚಾರ ಇದೀಗ ತೀವ್ರ ವಿವಾದ ಹುಟ್ಟುಹಾಕಿದೆ. ಬೇಕಂತಲೇ ಸುದೀಪ್ ಫೋಟೋವನ್ನು ಬಿಡಲಾಗಿದೆ ಎಂಬ ವಾದ ನಡೆಯುತ್ತಿದೆ.
ದರ್ಶನ್ಗಾಗಿಯೇ ಸುದೀಪ್ ಫೋಟೋ ಬಿಡಲಾಯಿತೇ?
ಚಿತ್ರದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂದಿದ್ದರು. ಹೀಗಾಗಿ ದರ್ಶನ್ ಕಾರ್ಯಕ್ರಮಕ್ಕೆ ಬರ್ತಾರೆ ಅನ್ನೋ ಕಾರಣದಿಂದಲೇ ಸುದೀಪ್ ಅವರನ್ನು ವಿಡಿಯೋದಿಂದ ಕೈಬಿಡಲಾಯಿತಾ? ಎಂಬ ಅನುಮಾನ ಹುಟ್ಟು ಹಾಕಿದೆ. ಈ ಮೂಲಕ ಮತ್ತೆ ಹಳೇ ದೋಸ್ತಿಗಳ ಮಧ್ಯೆ ಕಿಡಿ ಹೊತ್ತಿಕೊಂಡಿದೆಯಾ ಎಂಬ ಸಂದೇಹ ಮೂಡತೊಡಗಿದೆ.
ನೋ ಕಮೆಂಟ್ಸ್ ಎಂದ ಆದಿತ್ಯ
ಸುದೀಪ್ ಫೋಟೋ ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಟ ಆದಿತ್ಯ, ನೋ ಕಮೆಂಟ್ಸ್ ಎಂದರು. ನಾನು ವಿಡಿಯೋವನ್ನು ನೋಡಿಲ್ಲ. ಅದನ್ನು ಮಾಡಿದವರನ್ನು ಕೇಳಿ ಎಂದರು. ಮುಂದುವರಿದು ಮಾತನಾಡಿದ ಅವರು ನಾವು ಹಿರಿಯರ ಆದ್ಯತೆ ಮೇಲೆ ನೀಡಿದ್ದೇವೆ ಎಂದಾಗ ಇತ್ತೀಚಿನ ನಿರ್ದೇಶಕರಾದ ಚೇತನ್ ಮತ್ತು ಪ್ರಶಾಂತ್ ನೀಲ್ ಅವರ ಹೆಸರಿದೆಯಲ್ಲ ಎಂದು ಪ್ರಶ್ನಿಸಿದ್ದಕ್ಕೆ ಮಾತು ಬದಲಾಯಿಸಿದ ಆದಿತ್ಯ ಸಂಬಂಧಪಟ್ಟವರನ್ನು ಕೇಳಿ ಎಂದು ಮಾತು ಮುಗಿಸಿದರು. (ದಿಗ್ವಿಜಯ ನ್ಯೂಸ್)