

ಬೆಂಗಳೂರು: ಸುದೀಪ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಎರಡ್ಮೂರು ವರ್ಷಗಳೇ ಆಗಿದ್ದವು. ಈ ವರ್ಷವೂ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೋ, ಇಲ್ಲವೋ ಎಂಬ ಆತಂಕ ಅಭಿಮಾನಿಗಳಲ್ಲಿತ್ತು. ಆ ಆತಂಕ ಕೊನೆಗೂ ದೂರವಾಗಿದೆ. ಶುಕ್ರವಾರ, ಸುದೀಪ್ ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಟರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿದ್ದರೆ, ಮೊದಲೇ ಅಭಿಮಾನಿಗಳಿಗೆ ಯಾವುದಾದರೊಂದು ಮಾಧ್ಯಮದ ಮೂಲಕ ತಿಳಿಸಿರುತ್ತಾರೆ. ಸುದೀಪ್ ಸಹ ಈ ಹಿಂದೆ ಇದೇ ರೀತಿ ಆಚರಿಸಿಕೊಳ್ಳುವುದಿಲ್ಲ ಎಂದಿದ್ದರು. ಈ ಬಾರಿಯೂ ಸುದೀಪ್ ಅವರ ನಡೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಆದರೆ, ಸುದೀಪ್ ಕಡೆಯಿಂದ ಯಾವುದೇ ಸಂದೇಶ ಬರದಿದ್ದರಿಂದ ಅಭಿಮಾನಿಗಳು ಖುಷಿಯಾದರು. ಈ ಬಾರಿ ಸುದೀಪ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ ಎಂಬ ಖುಷಿಯಲ್ಲಿ ಶುಕ್ರವಾರ ಮುಂಜಾನೆಯಿಂದಲೇ ಸುದೀಪ್ ಅವರ ಜೆ.ಪಿ. ನಗರದ ಮನೆಯ ಮುಂದೆ ಜಮಾಯಿಸಿದರು. ಹಾರ, ಕೇಕು, ಉಡುಗೊರೆಗಳನ್ನು ತಮ್ಮ ಮೆಚ್ಚಿನ ನಟನಿಗಾಗಿ ಅವರು ತಂದಿದ್ದರು. ಅಭಿಮಾನಿಗಳ ಪ್ರೀತಿಸಿಗೆ ಸ್ಪಂದಿಸಿದ ಸುದೀಪ್, ಅವರೊಂದಿಗೆ ಸೆಲ್ಪಿ ತೆಗೆಸಿಕೊಂಡು, ಅವರು ತಂದಿದ್ದ ಕೇಕುಗಳನ್ನು ಕತ್ತರಿಸಿ ಆಚರಿಸಿಕೊಂಡರು.
ಸೆಲೆಬ್ರಿಟಿಗಳ ಹಾರೈಕೆ: ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ಗೆ ಹಲವು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಸುನೀಲ್ ಶೆಟ್ಟಿ, ರಿತೇಶ್ ದೇಶಮುಖ್, ಮಾಲಾಶ್ರೀ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಮೇಶ್, ಧನಂಜಯ, ಕಾರ್ತಿಕ್ ಜಯರಾಮ್ ಶುಭ ಕೋರಿದ್ದಾರೆ.
ಹೊಸ ಚಿತ್ರ ಘೋಷಣೆ ಇಲ್ಲ: ಈ ಬಾರಿ ಹುಟ್ಟುಹಬ್ಬಕ್ಕೆ ಸುದೀಪ್ ಅವರ ಹೊಸ ಚಿತ್ರದ ಘೋಷಣೆಯಾಗಬಹುದು ಎಂದು ನಂಬಿದ್ದ ಅಭಿಮಾನಿಗಳಿಗೆ ನಿರಾಶೆಯಾಯಿತು.
ಮುಖ್ಯಮಂತ್ರಿ ಬೊಮ್ಮಾಯಿ ಶುಭಾಶಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಷಿಯಲ್ ಮೀಡಿಯಾ ಮೂಲಕ ಸುದೀಪ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ‘ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡ ಚಿತ್ರರಂಗದ ಖ್ಯಾತಿಯನ್ನು ರಾಷ್ಟ್ರಮಟ್ಟಕ್ಕೇರಿಸಿದ, ಬಹುಭಾಷಾ ನಟ, ಆತ್ಮೀಯ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು’ ಎಂದು ಹೇಳಿದ್ದಾರೆ.