ಸದ್ದಿಲ್ಲದೆ 'ಮಾವು ಬೇವು' ಮುಗಿಸಿದ ಸುಚೇಂದ್ರ ಪ್ರಸಾದ್​ … ಈ ಚಿತ್ರದ ಸ್ಪೆಷಾಲಿಟಿ ಏನು ಗೊತ್ತಾ?

Maavu Bevu
Published on

ಬೆಂಗಳೂರು: ಈ ಹಿಂದೆ ಒಂದು ಕನ್ನಡ ಮತ್ತು ಸಂಸ್ಕೃತ ಚಿತ್ರವನ್ನು ನಿರ್ದೇಶಿಸಿದ್ದ ನಟ ಸುಚೇಂದ್ರ ಪ್ರಸಾದ್​ ಅವರು ಸದ್ದಿಲ್ಲದೆ 'ಮಾವು ಬೇವು' ಎಂಬ ಹೊಸ ಸಿನಿಮಾ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ವಿಶೇಷ ಏನು ಗೊತ್ತಾ? ಈ ಚಿತ್ರ ನಿರ್ಮಾವಾಗಿರುವುದು ಹಾಡುಗಳ ಸ್ಫೂರ್ತಿಯಿಂದ.

1970 ಮತ್ತ 80ರ ದಶಕದಲ್ಲಿ ಸಾಹಿತಿ ದೊಡ್ಡರಂಗೇಗೌಡ, ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಗೀತ ಸಂಯೋಜಕರಾದ ಅಶ್ವತ್ಥ್​-ವೈದಿ ಜೋಡಿಯಿಂದ 'ಮಾವು ಬೇವು' ಎಂಬ ಜನಪ್ರಿಯ ಹಾಡುಗಳ ಕ್ಯಾಸೆಟ್​ ಹೊರಬಂದಿದ್ದು ನೆನಪಿರಬಹುದು. 'ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು-ಬೆಲ್ಲ ...' ಮುಂತಾದ ಹಾಡುಗಳನ್ನಿಟ್ಟುಕೊಂಡು ಅದಕ್ಕೆ ಸೂಕ್ತವಾಗಿ ಕಥೆ ಮಾಡಿ. 'ಮಾವು ಬೇವು' ಹೆಸರಲ್ಲಿ ಚಿತ್ರ ಮಾಡಲಾಗಿದೆ. ಶ್ರೀ ಸಾಯಿ ಗಗನ್​ ಪ್ರೊಡಕ್ಷನ್ಸ್​ನಡಿ ಎಸ್​. ರಾಜೇಖರ್​ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಸಂಬಂಧಿಸಿದ ಸಮಾರಂಭವೊಂದು ನಡೆದಿದ್ದು, ಈ ಸಂದರ್ಭದಲ್ಲಿ ಲಹರಿ ವೇಲು, ಡಾ. ದೊಡ್ಡರಂಗೇಗೌಡ ಹಾಗೂ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದರು.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸುಚೇಂದ್ರ ಪ್ರಸಾದ್​, ''ಮಾವು ಬೇವು' ಹಲವು ಮೊದಲುಗಳ ಆಗರ. ಸಾಮಾನ್ಯವಾಗಿ ಚಿತ್ರ ಕಥೆಯನ್ನು ಮಾಡಿಕೊಂಡು, ಅದಕ್ಕೆ ಸೂಕ್ತ ಹಾಡುಗಳನ್ನು ಮಾಡುವುದು ಸಿದ್ಧ ಸೂತ್ರ. ಆದರೆ, ನಾವು ಹಾಡುಗಳನ್ನು ಇಟ್ಟುಕೊಂಡು ಚಿತ್ರ ಕಥೆಯನ್ನು ಮಾಡಿದ್ದೇವೆ. 'ಮಾವು ಬೇವು' ಕ್ಯಾಸೆಟ್​ನಲ್ಲಿರುವ 10 ಹಾಡುಗಳನ್ನು ಆಧಾರವಾಗಿಟ್ಟುಕೊಂಡು, ಇಂದಿನ ಸಮಕಾಲಿನ ಪರಿಸ್ಥಿತಿಗೆ ಅನುಗುಣವಾಗಿ ಚಿತ್ರ ಮಾಡಿದ್ದೇವೆ. ಜೊತೆಯಲ್ಲಿ ಹಳೆಯ ಕನ್ನಡ ಗಾದೆಗಳನ್ನು ಚಿತ್ರದ ಸಂಭಾಷಣೆಯಲ್ಲಿ ಅಳವಡಿಸಿಕೊಂಡಿರುವುದು ಮತ್ತೊಂದು ವಿಶೇಷ' ಎನ್ನುತ್ತಾರೆ.

'ಮಾವು ಬೇವು' ಚಿತ್ರದಲ್ಲಿ ಡ್ಯಾನಿ ಕುಟ್ಟಪ್ಪ, ಸುಪ್ರಿಯಾ ಎಸ್​.ರಾವ್​, ರಂಜಿತಾ, ಶ್ರೀನಿವಾಸಮೂರ್ತಿ, ಸುಂದರಶ್ರೀ, ನೀನಾಸಂ ಸಂದೀಪ್​, ಚೈತ್ರ, ಸಿತಾರ ಚಕ್ರವರ್ತಿ, ರಂಜನ್​ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ನಾಗರಾಜ ಅದವಾನಿ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net