ಫ್ಲಾಪ್​ ಹೀರೋಯಿನ್​ ಐಶ್ವರ್ಯಾ ರೈಗೆ ಪುನರ್ಜನ್ಮ ನೀಡಿದ್ದು ಈ ಸಿನಿಮಾ!

cover-1534162747
Published on

ಬಾಲಿವುಡ್ ನಟಿ ಐಶ್ವರ್ಯಾ ರೈ, ಸಿನಿಮಾರಂಗಕ್ಕೆ 1997ರಲ್ಲಿ ಬಂದಿದ್ದರಾದರೂ, ಅವರನ್ನು ಐಶ್ವರ್ಯಾ ಎಂದು ಗುರುತಿಸುವಂತೆ ಮಾಡಿದ ಸಿನಿಮಾ 1999ರಲ್ಲಿ ಬಂದ ‘ತಾಲ್​‘. ಮಣಿರತ್ನಂ ಜತೆಗೆ ಕಾಲಿವುಡ್​ನಲ್ಲಿ ತಯಾರಾದ ‘ಇರುವರ್​’ ಮೂಲಕ ಎಂಟ್ರಿ ಪಡೆದರೂ, ಬಳಿಕ ಬಂದ ಮೂರ್ನಾಲ್ಕು ಸಿನಿಮಾಗಳಲ್ಲಿ ಐಶ್ವರ್ಯಾ ಫ್ಲಾಪ್​ ಆದರು! ಆಗ ಆ ಫ್ಲಾಪ್​​ ನಟಿಯನ್ನೇ ‘ತಾಲ್​’ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ದುಕೊಂಡರು ನಿರ್ದೇಶಕ ಸುಭಾಷ್​ ಘಾಯ್​. ನಿರ್ದೇಶಕರ ಆಪ್ತರು ಐಶ್ವರ್ಯಾ ಆಯ್ಕೆಗೆ ಕೊಂಚ ನಕಾರ ತೆಗೆದರೂ., ‘ನನಗೆ ಐಶ್ವರ್ಯಾಳೇ ಬೇಕು’ ಎಂದಿದ್ದರು ಸುಭಾಷ್​. ಯಾಕೆ ಎಂಬುದನ್ನು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದಾರೆ.

‘ನಾನು ಯಾವುದೇ ನಟ ಅಥವಾ ನಟಿಯನ್ನು ಆಯ್ದುಕೊಳ್ಳಲಿ. ಆಗ ನಾನು ಅವರ ಪರ್ಸನಾಲಿಟಿಯನ್ನು ಗಮನಿಸುವುದಿಲ್ಲ. ಬದಲಿಗೆ ಅವರ ಆಂತರ್ಯವನ್ನು ಗಮನಿಸುತ್ತೇನೆ. ಅವರ ಹಿಂದಿನ ಸಿನಿಮಾ ಹಿಟ್ ಅಥವಾ ಫ್ಲಾಪ್​​ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಹೀಗಿರುವಾಗಲೇ ನಾನು ಐಶ್ವರ್ಯಾ ಅವರನ್ನು ಭೇಟಿಯಾದೆ. ಆ ಹೊತ್ತಲ್ಲಿ ಅವರ ಸಿನಿಮಾಗಳು ಸೋಲನುಭವಿಸುತ್ತಿದ್ದವು. ಆಗ ಅವರೊಳಗಿನ ಕಾಣದ ಸೌಂದರ್ಯವನ್ನು ಕಂಡೆ. ರಾ ಬ್ಯೂಟಿಯನ್ನು ನೋಡಿದೆ. ಅದೇ ತಾಲ್​ಗೆ ನಾಯಕಿಯನ್ನಾಗಿ ಮಾಡಿತು’ ಎಂದು ಆ ಸಿನಿಮಾದ ನಾಯಕಿ ಆಯ್ಕೆ ವಿಚಾರವನ್ನು ಹೇಳಿಕೊಳ್ಳುತ್ತಾರೆ ಸುಭಾಷ್​.

ಆ ಸಿನಿಮಾ ತೆರೆಕಂಡ ಮೇಲೆ ದೊಡ್ಡ ಇತಿಹಾಸವೇ ಸೃಷ್ಟಿಯಾಯಿತು. ಫಿಲಂ ಫೇರ್​ ಪ್ರಶಸ್ತಿಯ ಜತೆಗೆ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ದೊಡ್ಡ ಗೆಲುವು ಸಾಧಿಸಿತು. ಸೋಲಿನ ಸುಳಿಗೆ ಸಿಲುಕಿದ್ದ ಐಶ್ವರ್ಯಾ ಗೆಲುವಿನ ಲಯಕ್ಕೆ ಮರಳಿದರು. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವುದರ ಜತೆಗೆ ಸರಣಿ ಸಿನಿಮಾ ಅವಕಾಶಗಳೂ ಅವರನ್ನು ಹುಡುಕಿಕೊಂಡು ಬಂದವು. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net