ಸುಭಾಷ್ ಘಾಯ್ ಎಂಥಾ ಕಾಟ ಕೊಟ್ಟಿದ್ದರು ಗೊತ್ತಾ?: ಮಹಿಮಾ

Mahima - Subhash Ghai Final
Published on

ಬಾಲಿವುಡ್‍ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಲಾಢ್ಯರು ಹೇಗೆಲ್ಲಾ ಹೊಸಬರು ಮತ್ತು ಹೊರಗಿನವರಿಗೆ ಕಾಟ ಕೊಡುತ್ತಾರೆ ಎಂಬ ಬಿಸಿಬಿಸಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲ, ಸಲ್ಮಾನ್ ಖಾನ್, ಕರಣ್ ಜೋಹರ್ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳು ಹೇಗೆ ಆಟ ಆಡುತ್ತಾರೆ ಎಂದು ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇದು ಈಗಿನಿಂದಲ್ಲ, ಬಹಳ ವರ್ಷಗಳಿಂದ ಇದೆ ಎಂದು ನಟಿ ಮಹಿಮಾ ಚೌಧರಿ ಹೇಳಿಕೊಂಡಿದ್ದಾರೆ. ಜನಪ್ರಿಯ ನಿರ್ದೇಶಕ ಸುಭಾಷ್ ಘಾಯ್ ಹಿಂದೊಮ್ಮೆ ತಮಗೆ ಹೇಗೆಲ್ಲಾ ಕಾಟ ಕೊಟ್ಟಿದ್ದರು ಎಂದು ವಿವರಿಸಿದ್ದಾರೆ. ಮಹಿಮಾ ಅಭಿನಯದ ಮೊದಲ ಚಿತ್ರ `ಪರದೇಸ್' ಬಿಡುಗಡೆಯಾಗಿ 23 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ಎಷ್ಟೆಲ್ಲಾ ಕಷ್ಟಪಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

`ನಿಜಕ್ಕೂ ಸುಭಾಷ್ ಘಾಯ್ ನನಗೆ ತುಂಬಾ ಕಾಟ ಕೊಟ್ಟರು. ಆಗ ನಾನು ಚಿತ್ರರಂಗಕ್ಕೆ ಹೊಸಬಳಾಗಿದ್ದೆ. ಏನು ಮಾಡಬೇಕು ಎಂದು ಗೊತ್ತಾಗದೇ ಕಂಗಾಲಾಗಿದ್ದೆ. ನನಗೆ, `ಪರದೇಸ್' ಮೂಲಕ ಬ್ರೇಕ್ ಕೊಟ್ಟಿದ್ದು ಅವರು. ಆದರೆ, ಬೇರೆಯವರ ಜತೆಗೆ ಕೆಲಸ ಮಾಡಬಾರದು ಎಂದು ಕಾಟಕೊಟ್ಟರು. ಕೇಳಿದರೆ, ತಮ್ಮ ಬಳಿ ಅಗ್ರೀಮೆಂಟ್ ಇದೆ ಎನ್ನುತ್ತಿದ್ದರು. ಅಷ್ಟೇ ಅಲ್ಲ, ಎಲ್ಲಾ ನಿರ್ಮಾಪಕರಿಗೂ, ನನ್ನ ಜತೆಗೆ ಕೆಲಸ ಮಾಡಬಾರದು ಎಂದು ಹೇಳಿದ್ದರು. ಸಾಲದ್ದಕ್ಕೆ ಟ್ರೇಡ್ ಗೈಡ್ ಮ್ಯಾಗಜೀನ್‍ನಲ್ಲಿ ಒಂದು ಜಾಹೀರಾತು ಕೊಟ್ಟಿದ್ದರು. ಯಾರಾದರೂ ನನ್ನ ಜತೆಗೆ ಕೆಲಸ ಮಾಡಬೇಕು ಎಂದಿದ್ದರೆ, ಮೊದಲು ತಮ್ಮ ಅನುಮತಿ ಪಡೆಯಬೇಕು ಎಂದಿದ್ದರು. ಇದರಿಂದ ನನ್ನ ವೃತ್ತಿ ಜೀವನಕ್ಕೆ ದೊಡ್ಡ ಪೆಟ್ಟು ಬಿತ್ತು' ಎಂದು ಅವರು ಹೇಳಿಕೊಂಡಿದ್ದಾರೆ.

`ಎಲ್ಲಾ ಅಂದುಕೊಂಡಂತೆ ಆಗಿದ್ದರೆ, `ಪರದೇಸ್' ನಂತರ ನನ್ನ ಎರಡನೆಯ ಚಿತ್ರ ರಾಮ್‍ಗೋಪಾಲ್ ವರ್ಮಾ ನಿರ್ದೇಶನದ `ಸತ್ಯ' ಆಗಬೇಕಿತ್ತು. ನಾನು ಅವರ ಬಳಿ ಅಡ್ವಾನ್ಸ್ ತೆಗೆದುಕೊಂಡಿದ್ದೆ. ಆ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಸಂದರ್ಶನಗಳಲ್ಲೂ ಹೇಳಿಕೊಂಡಿದ್ದೆ. ಆದರೆ, ಈ ಜಾಹೀರಾತು ನೋಡಿ ವರ್ಮಾ, ನನ್ನ ಜತೆಗೆ ಕೆಲಸ ಮಾಡುವುದಕ್ಕೆ ಹಿಂದೇಟು ಹಾಕಿದರು. ಊರ್ಮಿಳಾ ಜತೆಗೆ ಚಿತ್ರ ಮಾಡಿದರು. ಅವರು ಚಿತ್ರ ಶುರು ಮಾಡಿದ್ದು ಸಹ ನನಗೆ ಗೊತ್ತಾಗಲಿಲ್ಲ' ಎಂದು ಮಹಿಮಾ ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ತಮ್ಮ ನೆರವಿಗೆ ಹೆಚ್ಚು ಜನ ಬರಲಿಲ್ಲ ಎಂದಿರುವ ಅವರು, `ಇಷ್ಟೆಲ್ಲಾ ಆಗುತ್ತಿದ್ದರೂ, ನಾಲ್ಕು ಜನರನ್ನು ಬಿಟ್ಟು ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಸಂಜಯ್ ದತ್, ಸಲ್ಮಾನ್ ಖಾನ್, ನಿರ್ದೇಶಕರಾದ ಡೇವಿಡ್ ಧವನ್ ಮತ್ತು ರಾಜಕುಮಾರ್ ಸಂತೋಷಿ ಮಾತ್ರ ನನ್ನ ನೆರವಿಗೆ ಬಂದು, ಧೈರ್ಯ ತುಂಬಿದರು. ಮಿಕ್ಕಂತೆ ಯಾರೊಬ್ಬರೂ ನನಗೆ ಒಂದು ಫೋನ್ ಸಹ ಮಾಡಲಿಲ್ಲ' ಎಂದು ಮಹಿಮಾ ಬೇಸರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net