ಕಥೆ-ಚಿತ್ರಕಥೆ ಅಜೇಯ್ ರಾವ್!

ajay rao
Published on

 ಬೆಂಗಳೂರು: ಮೊದಲೇ ಅಜೇಯ್ ರಾವ್ ಎಲ್ಲೂ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಲಾಕ್​ಡೌನ್ ಸಂದರ್ಭದಲ್ಲಂತೂ ಅವರು ಇನ್ನೂ ಭೂಗತರಾಗಿದ್ದರು ಎಂದರೆ ತಪ್ಪಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಕಾಣಿಸಿಕೊಳ್ಳದ ಅಜೇಯ್, ಕಳೆದ ಎರಡು ತಿಂಗಳಿನಿಂದ ಏನು ಮಾಡುತ್ತಿದ್ದರು ಎಂದರೆ, ಕಥೆ ಬರೆಯುತ್ತಿದ್ದಾಗಿ ಅವರು ಹೇಳುತ್ತಾರೆ.

‘ಗುರು ದೇಶಪಾಂಡೆ ಅವರ ನಿರ್ದೇಶನದಲ್ಲಿ ಒಂದು ಚಿತ್ರ ಶುರುವಾಗಬೇಕಿತ್ತು. ಕಥೆ ಅವರದೇ. ಚಿತ್ರಕಥೆ ಮಾತ್ರ ನಾನು ಬರೆದೆ. ಜತೆಗೆ ಒಂದು ವರ್ಷನ್ ಸಂಭಾಷಣೆಯನ್ನೂ ಬರೆದೆ. ಇದರ ಜತೆಗೆ ಒಂದೆರೆಡು ಕಥೆ ಬರೆದೆ. ‘ತಾಜ್ ಮಹಲ್’ಗೂ ಮುನ್ನ ನಾನು ಮುಂಚೆ ನಾಟಕ ಬರೆಯುತ್ತಿದ್ದೆ. ಆಮೇಲೆ ಬರವಣಿಗೆ ಮಿಸ್ ಆಗಿತ್ತು. ಈ ಸಮಯದಲ್ಲಿ ಕೂತು ಮೂರು ಸ್ಕ್ರಿಪ್ಟ್ ಮಾಡಿದೆ. ಅದನ್ನು ನಿರ್ಮಾಣ ಮಾಡುತ್ತೀನೋ ಅಥವಾ ನಿರ್ದೇಶನ ಮಾಡುತ್ತೀನೋ ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ಇನ್-ಡೀಟೇಲ್ ಬರೆದಿಟ್ಟಿದ್ದೇನೆ’ ಎನ್ನುತ್ತಾರೆ ಅಜೇಯ್.

ಇಷ್ಟರಲ್ಲಿ ಅಜೇಯ್ ಅಭಿನಯದ 2 ಚಿತ್ರಗಳು ಬಿಡುಗಡೆಯಾಗಿರಬೇಕಿತ್ತು. ‘ಕೃಷ್ಣ ಟಾಕೀಸ್’ ಮತ್ತು ‘ಶೋಕಿವಾಲಾ’. ಆದರೆ, ಲಾಕ್​ಡೌನ್​ನಿಂದ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿವೆ. ‘ನನ್ನ ಚಿತ್ರಗಳು ಬಿಡುಗಡೆ ಯಾಗಬೇಕು ಎನ್ನುವುದಕ್ಕಿಂತ ಚಿತ್ರರಂಗ ರಿವೈವ್ ಆಗಬೇಕು. ಏಕೆಂದರೆ, ಚಿತ್ರರಂಗದ ಮೇಲೆ ನಮ್ಮ ಭವಿಷ್ಯ ಇದೆ. ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತದೆ, ಚಿತ್ರ ಪ್ರದರ್ಶನ ಯಾವಾಗಿನಿಂದ ಶುರುವಾಗುತ್ತದೆ, ಶುರುವಾದರೂ ಜನ ಚಿತ್ರ ನೋಡುತ್ತಾರಾ ಎಂಬ ವಿಷಯಗಳ ಬಗ್ಗೆ ಸದ್ಯಕ್ಕೆ ಯಾರಲ್ಲೂ ಕ್ಲಾರಿಟಿ ಇಲ್ಲ. ಎಲ್ಲರಂತೆ ನಾನು ಸಹ ಕಾಯುತ್ತಿದ್ದೇನೆ. ಮೊದಲು ನಿರ್ವಪಕರು ಉಳಿಯಬೇಕು’ ಎಂಬುದು ಅಜೇಯ್ ಅಭಿಪ್ರಾಯ. ಇನ್ನು ಲಾಕ್​ಡೌನ್ ಸಂದರ್ಭದಲ್ಲಿ ಅವರನ್ನು ಕಾಪಾಡಿದ್ದು, ಅವರ ಮಗಳಂತೆ. ‘ಈ ಸಮಯದಲ್ಲಿ ಏನು ಮಾಡಬೇಕು ಎಂಬುದು ಗೊತ್ತಿರಲಿಲ್ಲ. ನಮ್ಮನ್ನು ಕಾಪಾಡಿದ ತಾಯಿ ಅವಳು. ಒಂದೂವರೆ ವರ್ಷ ಅವಳಿಗೆ. ಅವಳ ಜತೆ ಕಾಲ ಕಳೆದು, ಬಿಟ್ಟಿರೋದೇ ಕಷ್ಟವಾಗಿದೆ. ಕೆಲಸದ ವಿಷಯ ಆಫೀಸಿಗೆ ಹೋದರೂ, ಯಾವಾಗ ಮನೆಗೆ ಹೋಗುತ್ತೀನಿ ಅಂತ ಅನಿಸಿ ಬಿಡುತ್ತದೆ’ ಎನ್ನುತ್ತಾರೆ ಅಜೇಯ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net