ಜೈಲರ್ ಸಿನಿಮಾ ನೋಡಿದ ಬಳಿಕ ನೀವು ಹುಡುಕುತ್ತಿರುವ ಈ ಪಾತ್ರಧಾರಿ ಇಂದು ಜೀವಂತವಾಗಿಲ್ಲ ಎಂಬುದೇ ಸತ್ಯ!

Verman Ramesh
Published on

ಚೆನ್ನೈ: ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಜೈಲರ್​ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ಪ್ರತಿಯೊಂದು ಪಾತ್ರವು ಕೂಡ ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ರಜಿನಿ, ಮೋಹನ್​ಲಾಲ್​ ಮತ್ತು ಶಿವರಾಜ್​ಕುಮಾರ್​ ಅವರು ಹೀರೋ ಅಪಿಯರೆನ್ಸ್​ ಮಾತ್ರವಲ್ಲದೆ, ಖಳನಾಯಕ ವಿನಾಯಕನ್​ ಕೂಡ ಜನರ ಗಮನ ಸೆಳೆದಿದ್ದಾರೆ. ಹಾಸ್ಯ ನಟರಾಗಿ ಯೋಗಿ ಬಾಬು ಮತ್ತು ಸುನೀಲ್​ ಕೂಡ ಮಿಂಚು ಹರಿಸಿದ್ದಾರೆ.

ಇವರೆಲ್ಲರ ನಡುವೆ ಸಿನಿಮಾದ ಇನ್ನೊಂದು ಪಾತ್ರ ಜನರ ಮನಸ್ಸಿನಲ್ಲಿ ಉಳಿದಿದೆ. ನಟ ಹಾಗೂ ಡ್ಯಾನ್ಸರ್​ ರಮೇಶ್ ತಮ್ಮ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಸೆಳೆದಿದ್ದಾರೆ. ಈ ಸಿನಿಮಾದಲ್ಲ ರಮೇಶ್​ ಅವರು ಖಳನಾಯಕ ವಿನಾಯಕನ್​ ಜತೆಯಲ್ಲಿರುತ್ತಾರೆ. ಉದ್ವಿಗ್ನ ಪರಿಸ್ಥಿತಿಯಲ್ಲಿಯೂ ಹಾಸ್ಯಮಯ ಡ್ಯಾನ್ಸ್​ ಮಾಡುವುದೇ ರಮೇಶ್​ ಅವರ ವರ್ಮನ್​ ಪಾತ್ರ. ಚಿತ್ರಮಂದಿರದ ಬೆಳ್ಳಿಪರದೆಯಲ್ಲಿ ಈ ಪಾತ್ರವನ್ನು ನೋಡಿದವರ ಮುಖದಲ್ಲಿ ನಗು ಅರಳುವುದಂತೂ ಖಚಿತ.

ಇದೀಗ ಅಭಿಮಾನಿಗಳು ರೀಲ್ಸ್​ ಶೇರ್​ ಮಾಡಿಕೊಂಡು ವರ್ಮನ್​ ಅವರನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಆದರೆ, ವರ್ಮನ್​ ಅವರು ಸುಮಾರು ಏಳು ತಿಂಗಳ ಹಿಂದೆಯೇ ಜನವರಿಯಲ್ಲಿ ನಿಧನರಾದರು ಎಂಬುದು ಅನೇಕರಿಗೆ ತಿಳಿದಿಲ್ಲ. ರಮೇಶ್ ಅವರು ಜನವರಿ 27ರಂದು ತಮಿಳುನಾಡಿನ ಪುಲಿನಾಥೋಪೆ ಬಳಿ ಇರುವ ಕೆಪಿ ಪಾರ್ಕ್​ನ ಸ್ಲಂ ಬೋರ್ಡ್​ ಫ್ಲ್ಯಾಟ್​ನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಜನಪ್ರಿಯ ಸೋಶಿಯಲ್​ ಮೀಡಿಯಾ ಅಪ್ಲಿಕೇಶ್​ ಟಿಕ್‌ಟಾಕ್‌ ಸಂದರ್ಭದಲ್ಲೂ ಸಹ ರಮೇಶ್ ಅವರು ಮೂನ್​ವಾಕ್​ ಸೇರಿದಂತೆ ವಿಶಿಷ್ಟವಾದ ನೃತ್ಯಗಳನ್ನು ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು.

ಪೊಲೀಸರ ಪ್ರಕಾರ ನಟ ರಮೇಶ್ ಅವರು ಆತಂಕದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಇದೇ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ. ಜೈಲರ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ರಮೇಶ್ ಅವರ ಅಭಿನಯಕ್ಕಾಗಿ ಹೊಗಳುತ್ತಿದ್ದಾರೆ. ಆದರೆ, ತಮ್ಮ ಖ್ಯಾತಿಯನ್ನು ಆನಂದಿಸಲು ರಮೇಶ್​ ಅವರೇ ಇಂದು ಜನರ ನಡುವೆ ಇಲ್ಲ ಎಂಬುದು ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net