ಸ್ಟಾರ್ಟ್ ಕ್ಯಾಮರಾ ಆ್ಯಕ್ಷನ್; ಜುಲೈನಲ್ಲಿ ಶೂಟಿಂಗ್ ಪರ್ವ

Cinima Lead
Published on

ಬೆಂಗಳೂರು: ಚಿತ್ರರಂಗ ಮತ್ತೆ ತಹಬದಿಗೆ ಬರುತ್ತಿದೆ. ಚಿತ್ರೀಕರಣಕ್ಕೆ ಚಿತ್ರತಂಡಗಳು ಚಾಲನೆ ನೀಡುತ್ತಿವೆ. ಸೋಮವಾರದಿಂದ ಶಿವರಾಜಕುಮಾರ್, ಉಪೇಂದ್ರ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ. ಇನ್ನೂ ಹತ್ತು ಹಲವು ತಂಡಗಳು ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿವೆ. ಆ ಪೈಕಿ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್್ಸ’, ಶ್ರೀಮುರಳಿ ಅಭಿನಯದ ‘ಮದಗಜ’ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳು ಸಹ ಸೇರಿವೆ. ಕರೊನಾ ಎರಡನೇ ಅಲೆಯ ಲಾಕ್​ಡೌನ್ ಇಲ್ಲಿದಿದ್ದರೆ, ಬಹುಶಃ ಈ ಮೂರೂ ಚಿತ್ರಗಳ ಚಿತ್ರೀಕರಣ ಇಷ್ಟರಲ್ಲಿ ಮುಗಿದು ಹೋಗಿರುತ್ತಿತ್ತೋ ಏನೋ? ಆದರೆ, ಲಾಕ್​ಡೌನ್​ನಿಂದಾಗಿ ಎಲ್ಲವೂ ತಡವಾಗಿದ್ದು, ಜುಲೈ 12ರಿಂದ ‘ಮದಗಜ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಶುರುವಾದರೆ, ಜುಲೈ 15ರಿಂದ ‘ಜೇಮ್್ಸ’ ಮತ್ತು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಲಿದೆ.

ಚಿತ್ರೀಕರಣವನ್ನು ಪುನಃ ಪ್ರಾರಂಭ ಮಾಡುತ್ತಿರುವ ಬಗ್ಗೆ ಮಾತನಾಡುವ ‘ಮದಗಜ’ ಚಿತ್ರದ ನಿರ್ದೇಶಕ ಮಹೇಶ್, ‘ಎಚ್​ಎಂಟಿಯಲ್ಲಿ ಒಂದೂವರೆ ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್ ಕೆಲಸ ನಡೆಯುತ್ತಿದೆ. ಜುಲೈ 12ರಿಂದ ನಾಯಕನ ಇಂಟ್ರೊಡಕ್ಷನ್ ಹಾಡಿನ ಶೂಟಿಂಗ್ ಮೂಲಕ ಕೆಲಸ ಆರಂಭವಾಗಲಿದೆ. ಅಲ್ಲಿಂದ ಒಟ್ಟಾರೆ 17 ದಿನದ ಶೂಟಿಂಗ್ ಮುಗಿದರೆ, ಸಿನಿಮಾ ಮುಕ್ತಾಯವಾಗಲಿದೆ. ಎಚ್​ಎಂಟಿ, ಮೈಸೂರಿನಲ್ಲೊಂದು ಸೆಲೆಬ್ರೆಷನ್ ಹಾಡು ಬಳಿಕ ಮೇಕೆದಾಟುವಿನಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ನಡೆಯಲಿದೆ. ಆಶಿಕಾ ರಂಗನಾಥ್, ಜಗಪತಿ ಬಾಬು ಸೇರಿ ಚಿತ್ರದ ಪ್ರಮುಖ ಕಲಾವಿದರೆಲ್ಲ ಶೂಟಿಂಗ್​ನಲ್ಲಿ ಭಾಗವಹಿಸಲಿದ್ದಾರೆ’ ಎಂಬುದು ನಿರ್ದೇಶಕರ ಮಾತು.

ಇನ್ನು, ಲಾಕ್​ಡೌನ್​ಗೂ ಮುನ್ನ ‘ಜೇಮ್್ಸ’ ಚಿತ್ರದ ಶೇ. 70ರಷ್ಟು ಚಿತ್ರೀಕರಣ ಮುಗಿದಿತ್ತು. ಜಮ್ಮು ಕಾಶ್ಮೀರದಲ್ಲಿ ಪ್ರಮುಖ ದೃಶ್ಯಗಳನ್ನು ಸೆರೆಹಿಡಿದು ಬಂದಿದ್ದರು ನಿರ್ದೇಶಕ ಚೇತನ್. ಈಗ ಜುಲೈ 15ರಿಂದ ಬಾಕಿ ಇರುವ ಚಿತ್ರೀಕರಣ ಮುಗಿಸಲಾಗುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೂ ಬೆಂಗಳೂರಿನಲ್ಲಿ ಅರ್ಧದಷ್ಟು ಚಿತ್ರೀಕರಣ ಮಾಡಲಾಗಿದ್ದು, ಬಾಕಿ ಉಳಿದಿರುವ ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸಲು ಉದ್ದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net