

ಬೆಂಗಳೂರು: ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಾಗಲೇ ಅವರೆಲ್ಲ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರಬೇಕಿತ್ತು. ಆದರೆ, ಕರೊನಾ ಬಂತು ನೋಡಿ. ಎಲ್ಲವೂ ನಿಧನವಾಯಿತು. ಎರಡ್ಮೂರು ವರ್ಷಗಳ ಹಿಂದೆ ಬಣ್ಣ ಹಚ್ಚಿದವರು, ಮೊದಲ ಚಿತ್ರ ಬಿಡುಗಡೆ ಆಗುವುದಕ್ಕೆ ಇಲ್ಲಿಯವರೆಗೂ ಕಾಯುವಂತಾಯಿತು. ಈಗ ಈ ವರ್ಷ ಒಂದಿಷ್ಟು ಸ್ಟಾರ್ ಮಕ್ಕಳ ಮೊದಲ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿವೆ. ಈ ಅದೃಷ್ಟಪರೀಕ್ಷೆಯಲ್ಲಿ ಗೆಲ್ಲೋರ್ಯಾರು? ಚಿತ್ರರಂಗದಲ್ಲಿ ನೆಲೆ ನಿಲ್ಲೋರ್ಯಾರು? ಉತ್ತರ ಇದೇ ವರ್ಷ ಸಿಗಲಿದೆ.
ಸಿನಿಮಾ ಕುಟುಂಬದಿಂದ ಬಂದವರೆಲ್ಲ ಗೆಲ್ಲುತ್ತಾರೆ, ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆ ಎಂದು ಹೇಳುವುದು ಕಷ್ಟ. ಆದರೆ, ಸ್ಟಾರ್ ಕುಟುಂಬದಿಂದ ಬಂದವರಿಗೆ ಪ್ರಚಾರ, ಪ್ರಾಮುಖ್ಯತೆ ತುಸು ಬೇಗ ಮತ್ತು ಸ್ವಲ್ಪ ಜಾಸ್ತಿಯೇ ಸಿಗುತ್ತದೆ. ಇನ್ನು, ಜನರಿಗೂ ಅವರ ಮೇಲೆ ನಿರೀಕ್ಷೆ, ಕುತೂಹಲ ಹೆಚ್ಚಿರುತ್ತದೆ. ಇದು ಒಂಥರಾ ಪ್ಲಸ್ ಹೌದು, ಕೆಲವೊಮ್ಮೆ ಮೈನಸ್ ಸಹ ಹೌದು. ಆ ಕುತೂಹಲ ಮತ್ತು ನಿರೀಕ್ಷೆಗಳಿಗೆ ತಕ್ಕ ಹಾಗೆ ಚಿತ್ರಗಳು ನಿಲುಕದಿದ್ದರೆ ಅದರಿಂದ ಸಾಕಷ್ಟು ಹಿನ್ನೆಡೆಯಾಗುತ್ತದೆ. ಈಗಾಗಲೇ ಮೊದಲ ಚಿತ್ರದಲ್ಲೇ ಈ ರೀತಿ ಹಿನ್ನಡೆ ಕಂಡ ಸ್ಟಾರ್ ಕುಟುಂಬದ ಹಲವು ನಟ-ನಟಿಯರಿದ್ದಾರೆ. ಕೆಲವರು ಆರಂಭಿಕ ಸೋಲುಗಳ ನಡುವೆಯೂ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಮತ್ತು ನಂತರದ ಯಶಸ್ಸುಗಳಿಂದ ಗೆಲುವು ಕಂಡುಕೊಂಡರೆ, ಇನ್ನೂ ಕೆಲವರು ಚಿತ್ರರಂಗದಿಂದಲೇ ದೂರವಾಗಿದ್ದಾರೆ.
ಹೀಗಿರುವಾಗಲೇ ಸ್ಟಾರ್ ಕುಟುಂಬದ ಹೊಸ ತಲೆಮಾರಿನ ಹಲವು ನಟರು ಈ ವರ್ಷ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಈ ಅದೃಷ್ಟಪರೀಕ್ಷೆ ಇಷ್ಟರಲ್ಲಾಗಲೇ ಮುಗಿದು ಹೋಗಿರಬೇಕಿತ್ತು. ಆದರೆ, ಕರೊನಾದಿಂದ ಎಲ್ಲವೂ ನಿಧಾನವಾಗಿದೆ. 2020ರಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರಗಳು, 2022ರಲ್ಲಿ ಬಿಡುಗಡೆಯಾಗುತ್ತಿವೆ. ರವಿಚಂದ್ರನ್ ಅವರ ಎರಡನೆಯ ಮಗ ವಿಕ್ರಮ್ ಶಶಿಕುಮಾರ್ ಮಗ ಅಕ್ಷಿತ್, ರಾಮ್ುಮಾರ್ ಮಗ ಧೀರೇನ್ ಮತ್ತು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ತಮ್ಮ ಮೊದಲ ಚಿತ್ರಗಳನ್ನು ಮುಗಿಸಿ, ಈ ವರ್ಷ ಬಿಡುಗಡೆಗೆ ಕಾದಿದ್ದಾರೆ.
ವಿಕ್ರಮ್ ಮೊದಲ ಚಿತ್ರ ನಾಗಶೇಖರ್ ನಿರ್ದೇಶಿಸಬೇಕಿತ್ತು. ಭರ್ಜರಿ ಫೋಟೋಶೂಟ್ ಸಹ ಆಗಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಶುರುವಾಗಲಿಲ್ಲ. ಆ ನಂತರ ಸಹನಾ ಮೂರ್ತಿ ನಿರ್ದೇಶನದ ‘ತ್ರಿವಿಕ್ರಮ’, ವಿಕ್ರಮ್ ಅವರ ಮೊದಲ ಚಿತ್ರವಾಯಿತು. ಈಗ ಆ ಚಿತ್ರ ಜೂನ್ 24ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಅಕ್ಷಿತ್ ಶಶಿಕುಮಾರ್ ಮೊದಲು ಬಣ್ಣ ಹಚ್ಚಿದ್ದು ‘ಸೀತಾಯಣ’ ಎಂಬ ಕನ್ನಡ-ತೆಲುಗು ಚಿತ್ರದ ಮೂಲಕ. ಈ ಚಿತ್ರ ಮುಗಿಯುವ ಹೊತ್ತಿಗೆ ‘ಸಮಿತ್’ ಎಂಬ ಎರಡನೆಯ ಚಿತ್ರ ಶುರುವಾಯಿತು. ಇದಾದ ಕೆಲವೇ ದಿನಗಳಲ್ಲಿ ‘ಓ ಮೈ ಲವ್’ ಎಂಬ ಮೂರನೇ ಚಿತ್ರ ಪ್ರಾರಂಭವಾಯಿತು. ಈಗ ಮೂರನೆಯ ಚಿತ್ರವೇ ಮೊದಲಿಗೆ ಬಿಡುಗಡೆಯಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆೆ, ಅದು ಸಹ ಜೂನ್ 24ಕ್ಕೆ ಬಿಡುಗಡೆಯಾಗಲಿದೆ.
ಮೊದಲು ‘ದಾರಿ ತಪ್ಪಿದ ಮಗ’ ಹೆಸರಲ್ಲಿ ಶುರುವಾದ ಧೀರೇನ್ ರಾಮ್ುಮಾರ್ ಅಭಿನಯದ ಚಿತ್ರ, ಆ ನಂತರ ‘ಶಿವ 143’ ಎಂದು ಮರುನಾಮಕರಣವಾಗಿ, ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಟ್ರೇಲರ್ ಸಹ ಬಿಡುಗಡೆಯಾಗಿದೆ. ಇನ್ನು, ಚಿತ್ರ ಬಿಡುಗಡೆಯಾಗುವುದೊಂದೇ ಬಾಕಿ. ಈ ಮಧ್ಯೆ, ಧೀರೇನ್ ಇನ್ನೊಂದು ಚಿತ್ರವನ್ನೂ ಒಪ್ಪಿಕೊಂಡಿದ್ದು, ಮೊದಲ ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ, ಎರಡನೆಯದು ಪ್ರಾರಂಭವಾಗಲಿದೆ.
ಇನ್ನು, ನಿರಂಜನ್ ಈಗಾಗಲೇ ‘ಸೆಕೆಂಡ್ ಹಾಫ್’ ಎಂಬ ಚಿತ್ರದಲ್ಲಿ ನಟಿಸಿದ್ದರು. ಆದರೆ, ಅದು ಪ್ರಿಯಾಂಕಾ ಉಪೇಂದ್ರ ಅವರ ಚಿತ್ರವಾದ್ದರಿಂದ, ನಿರಂಜನ್ ಬಗ್ಗೆ ಅಷ್ಟು ಗಮನ ಯಾರಿಗೂ ಇರಲಿಲ್ಲ. ಆ ನಂತರ ‘ಸೂಪರ್ಸ್ಟಾರ್’, ‘ನಮ್ ಹುಡುಗ್ರು’, ‘ಹಂಟರ್’ ಎಂಬ ಚಿತ್ರಗಳಲ್ಲಿ ನಿರಂಜನ್ ನಟಿಸಿದ್ದಾರೆ. ಈ ಪೈಕಿ ‘ನಮ್ ಹುಡುಗ್ರು’ ಮೊದಲು ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲಿಗೆ, ಸ್ಟಾರ್ ಕುಟುಂಬದ ನಾಲ್ವರು ಕುಡಿಗಳು ಈ ವರ್ಷ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇಷ್ಟರಲ್ಲಿ ಯಾರ್ಯಾರು ಪರಂಪರೆಯನ್ನು ಮುಂದುವರೆಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.
ಮುಂದಿನ ವರ್ಷ ಯುವ ಚಿತ್ರ: ರಾಘವೇಂದ್ರ ರಾಜಕುಮಾರ್ ಅವರ ದ್ವಿತೀಯ ಪುತ್ರ ಯುವ ರಾಜಕುಮಾರ್ ಇಷ್ಟರಲ್ಲಾಗಲೇ ಚಿತ್ರರಂಗಕ್ಕೆ ಬರಬೇಕಿತ್ತು. ಆದರೆ, ಮೊದಲ ಚಿತ್ರ ‘ಯುವ ರಣಧೀರ ಕಂಠೀರವ’ ಅಂದುಕೊಂಡಂತೆ ಶುರುವಾಗಲಿಲ್ಲ. ಅದರ ಬದಲು ಸಂತೋಷ್ ಆನಂದರಾಮ್ ನಿರ್ದೇಶನದ ಚಿತ್ರದ ಮೂಲಕ ಯುವ ತೆರೆಗೆ ಬರುವುದಕ್ಕೆ ಮುಂದಾಗಿದ್ದು, ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.