

ಬೆಂಗಳೂರು: ನಟ ದಿಗಂತ್ ಅವರೊಂದಿಗೆ ಮಾರಿಗೋಲ್ಡ್ ಹಂಚಿಕೊಳ್ಳಲು ಈಗ ನಟಿ ಸಂಗೀತಾ ಶೃಂಗೇರಿ ಮುಂದಾಗಿದ್ದಾರೆ. ಅರ್ಥಾತ್, ದಿಗಂತ್ ನಾಯಕರಾಗಿ ಅಭಿನಯಿಸಲಿರುವ ‘ಮಾರಿಗೋಲ್ಡ್’ ಸಿನಿಮಾಗೆ ನಾಯಕಿ ಆಗಿ ಸಂಗೀತಾ ಶೃಂಗೇರಿ ಆಯ್ಕೆ ಆಗಿದ್ದಾರೆ. ‘ಆರ್.ವಿ. ಕ್ರಿಯೇಷನ್ಸ್’ ಬ್ಯಾನರ್ನಲ್ಲಿ ರಘುವರ್ಧನ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಈಗಾಗಲೇ ದಿಗಂತ್ ಅವರನ್ನು ನಾಯಕ ಎಂದು ನಿಗದಿ ಪಡಿಸಲಾಗಿತ್ತು. ಇದೀಗ ಅವರಿಗೆ ಜೋಡಿಯಾಗಿ ಸಂಗೀತಾ ಅವರನ್ನು ನಿರ್ದೇಶಕ ರಾಘವೇಂದ್ರ ಎಂ. ನಾಯ್್ಕ ಅಂತಿಮಗೊಳಿಸಿದ್ದಾರೆ. ಈ ಚಿತ್ರದ ಮೂಲಕ ರಾಘವೇಂದ್ರ ಸ್ಯಾಂಡಲ್ವುಡ್ನಲ್ಲಿ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
‘ಇದು ನಾಲ್ವರು ಗೆಳೆಯರ ಕಥೆ. ಅವರು ಒಂದು ಅಪರಾಧ ಪ್ರಕರಣದಲ್ಲಿ ಭಾಗಿಯಾದ ಮೇಲೆ ಏನೆಲ್ಲ ಆಗುತ್ತದೆ ಎಂಬುದು ಕಥಾಹಂದರ. ಆ ನಾಲ್ವರಲ್ಲಿ ಹೀರೋ-ಹೀರೋಯಿನ್ ಕೂಡ ಇರುತ್ತಾರೆ. ನಾಯಕಿಯ ಪಾತ್ರವನ್ನು ಸಂಗೀತಾ ಮಾಡಿದ್ದಾರೆ. ನಾಯಕಿಗೆ ಆರ್ಥಿಕ ಸಮಸ್ಯೆ ಇರುತ್ತದೆ. ಅದರ ಮಧ್ಯೆಯೂ ಜೀವನದಲ್ಲಿ ಸೆಟಲ್ ಆಗಬೇಕು ಎಂಬ ಆಸೆ ಇರುತ್ತದೆ. ಅಲ್ಲದೆ ಹೀರೋ ಜತೆಗೆ ಪ್ರೀತಿ ಕೂಡ ಹುಟ್ಟಿರುತ್ತದೆ. ಪ್ರೀತಿಯಾ ಜೀವನವಾ ಎಂಬ ತೊಳಲಾಟದ ನಡುವೆಯೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗುತ್ತಾರೆ’ ಎಂದು ಚಿತ್ರದ ಪಾತ್ರಗಳ ವಿವರ ತಿಳಿಸಿದರು ರಾಘವೇಂದ್ರ. ‘ಇಲ್ಲಿ ಮಾರಿ ಎಂದರೆ ಮಾರಾಟ, ಗೋಲ್ಡ್ ಎಂದರೆ ಚಿನ್ನದ ಗಟ್ಟಿ. ಅನಿರೀಕ್ಷಿತವಾಗಿ ನಡೆಯುವ ಅಪರಾಧ ಪ್ರಕರಣದಲ್ಲಿ ಗೋಲ್ಡ್ ಬಿಸ್ಕತ್ ಸಿಕ್ಕ ಬಳಿಕ ಏನೇನಾಗುತ್ತದೆ ಎಂಬುದೇ ಚಿತ್ರಕಥೆ. ಇದನ್ನು ಕಾಮಿಡಿಯಾಗಿ ಹೇಳಿದ್ದು, ಚಿತ್ರದ ಕೊನೆಯಲ್ಲಿ ಒಂದೊಳ್ಳೆಯ ಸಂದೇಶವಿದೆ. ಮಾ. 5ರಂದು ಶೂಟಿಂಗ್ ಆರಂಭವಾಗಲಿದೆ’ ಎಂದು ವಿವರ ನೀಡಿದರು.
ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಸಂಪತ್ ಮುಂತಾದವರು ಉಳಿದ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ವೀರ್ ಸಮರ್ಥ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ, ಕೆ.ಎಂ. ಪ್ರಕಾಶ್ ಸಂಕಲನ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ವಿಕ್ರಮ್ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ‘ನೆನಪಿರಲಿ’ ಪ್ರೇಮ್ ಅಭಿನಯದ ‘ಗುಣವಂತ’ ಸಿನಿಮಾ ನಿರ್ದೇಶನ ಮಾಡಿದ್ದ ರಘುವರ್ಧನ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.