

ಕನ್ನಡದ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಮತ್ತು ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ 'ಪಾ.ಪ. ಪಾಂಡು' ಖ್ಯಾತಿಯ ಶ್ರೀನಾಥ್ ವಸಿಷ್ಠ, ಕಳೆದ ಕೆಲವು ದಿನಗಳಿಂದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸುದ್ದಿ ಕೇಳಿದರೆ ಶಾಕ್ ಆಗುವುದು ನಿಜ. ಅದರಲ್ಲೂ ಕರೊನಾದಿಂದ ಬಹಳಷ್ಟು ಕಲಾವಿದರು ಮತ್ತು ತಂತ್ರಜ್ಱರು ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಿರುವಾಗ ಕೆಲವರು ಬೇರೆಬೇರೆ ಕೆಲಸಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಶ್ರೀನಾಥ್ ಸಹ ಅಂಥದ್ದೊಂದು ಹೆಜ್ಜೆ ಇಟ್ಟರಾ ಎಂಬ ಪ್ರಶ್ನೆ ಬರುವುದು ಸಹಜ.
ಹಾಗೇನಿಲ್ಲ. ಶ್ರೀನಾಥ್ ವಸಿಷ್ಠ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವುದು, ಕೆಲಸ ಇಲ್ಲ ಎಂದಲ್ಲ. ತಮ್ಮ ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಗಾರ್ಡ್ಗೆ ಕರೊನಾ ಸೋಂಕು ತಗುಲಿದೆ. ಮಿಕ್ಕ ಕೆಲವರು ಕ್ವಾರಂಟೈನ್ನಲ್ಲಿದ್ದಾರೆ. ಹೀಗಾಗಿ ಸೆಕ್ಯುರಿಟಿ ಗಾರ್ಡ್ ಕೆಲಸವನ್ನು ಅಪಾರ್ಟ್ಮೆಂಟ್ ನಿವಾಸಿಗಳೇ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀನಾಥ್ ವಸಿಷ್ಠ ಸಹ ಸರದಿಯ ಪ್ರಕಾರ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಮುಂದಿನ ಹತ್ತು ದಿನಗಳ ಕಾಲ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಅವರು ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಕುರಿತು, ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅವರು, ಸೆಕ್ಯುರಿಟಿ ಗಾರ್ಡ್ ಇಲ್ಲದ ಕಾರಣ, ಅಪಾರ್ಟ್ಮೆಂಟ್ ನಿವಾಸಿಗಳೇ ಸೆಕ್ಯುರಿಟಿ ನೋಡಿಕೊಳ್ಳುವುದಕ್ಕೆ ಮುಂದೆ ಬಂದಿದ್ದಾಗೆ ಹೇಳುತ್ತಾರೆ. ಈ ನಿಟ್ಟಿನಲ್ಲಿ ಅವರು ಸಹ ಮುಂದಿನ ಕೆಲವು ದಿವಸಗಳ ಕಾಲ ಮಧ್ಯಾಹ್ನದಿಂದ ರಾತ್ರಿಯವರೆಗೂ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದೊಂದು ಹೊಸ ಅನುಭವ ಎಂದು ಶ್ರೀನಾಥ್ ವಸಿಷ್ಠ ಹೇಳಿದ್ದಾರೆ.
ಬರೀ ಅವರಷ್ಟೇ ಅವರ ಪುತ್ರ ಋತ್ವಿಕ್ ವಸಿಷ್ಠ ಸಹ ಸೆಕ್ಯೂರಿಟಿ ಗಾರ್ಡ್ ಮಾಡಲಿದ್ದಾರೆ.