

ಬೆಂಗಳೂರು: ಕನ್ನಡದಲ್ಲಿ ಇದುವರೆಗೂ ಹಲವು ತರಹದ ಥ್ರಿಲ್ಲರ್ ಚಿತ್ರಗಳು ಬಂದಿವೆ. ಈಗ ಸೈಂಟಿಫಿಕ್ ಥ್ರಿಲ್ಲರ್ ಚಿತ್ರವೊಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು, ತೆಲುಗಿನಲ್ಲಿ 'ಕರಾಳ' ಮತ್ತು ಕನ್ನಡದಲ್ಲಿ 'ಬೀಗ' ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ.
'ಬೀಗ' ಕುರಿತು ಮಾತನಾಡುವ ಶ್ರೀನಂದನ್, 'ವೈಜ್ಞಾನಿಕ ಹಿನ್ನೆಲೆ ಇಟ್ಟುಕೊಂಡು ಮಾಡಿರುವ ಕಥೆ ಇದು. ರವಿಶಂಕರ್ ಅವರು ಸಸ್ಪೆಂಡ್ ಆದ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ಮನೆಯ ಲಾಕ್ ಓಪನ್ ಮಾಡಿದ ಮೇಲೆ ಅಲ್ಲಿ ಏನೇನು ನಡೆಯುತ್ತದೆ ಎಂದು ಚಿತ್ರದಲ್ಲಿ ಹೇಳಿದ್ದೇವೆ. ಇಲ್ಲಿ ಒಂದು ಆತ್ಮ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಹೆಣ್ಣು ಮಗುವೊಂದು ರಸ್ತೆಯಲ್ಲಿ ಬಂದಾಗ ಅದು ಮಗು ಎನ್ನುವುದನ್ನೂ ನೋಡದೆ ಕೆಲವರು ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಆ ತರಹದ ಮನಸ್ಥಿತಿ ಇದ್ದವರು ಈ ಚಿತ್ರ ನೋಡಿದ ಮೇಲೆ ಬದಲಾಗಬೇಕು ಎನ್ನುವುದು ನಮ್ಮ ಆಶಯ' ಎನ್ನುತ್ತಾರೆ ನಂದನ್.
ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣವಾಗಿದೆ. ಎಂ.ಬಿ. ಹಳ್ಳಿಕಟ್ಟೆ ಮತ್ತು ವೀನಸ್ ನಾಗರಾಜ್ ಛಾಯಾಗ್ರಹಣ ಮಾಡಿದ್ದು, ಶ್ರೀಗುರು ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ವಿ.ಎಂ.ಆರ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ಮುನಿಹನುಮಪ್ಪ, ಹೆಚ್.ಎಂ. ಶ್ರೀನಂದನ್ ಹಾಗೂ ಕೃಷ್ಣ ಎಲ್ ನಿರ್ಮಿಸಿದ್ದು, ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ.