

ಬೆಂಗಳೂರು: ಪ್ರಜ್ವಲ್ ಅಭಿನಯದ ‘ವೀರಂ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ, ಕಿಟ್ಟಿ ಪಾತ್ರ ಹೇಗಿರುತ್ತದೆ, ಅವರ ಯಾವ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ರಹಸ್ಯವನ್ನು ಚಿತ್ರತಂಡದವರು ಕಾಯ್ದುಕೊಂಡಿದ್ದರು.
ಇದೀಗ ಆ ರಹಸ್ಯ ಕೊನೆಗೂ ಬಯಲಾಗಿದೆ. ಇತ್ತೀಚೆಗೆ ಕೆಂಗೇರಿಯ ಸ್ಟುಡಿಯೋವೊಂದರಲ್ಲಿ ಪ್ರಜ್ವಲ್ ಮತ್ತು ಶ್ರೀನಗರ ಕಿಟ್ಟಿ ಅವರ ಫೋಟೋಶೂಟ್ ನಡೆದಿದೆ. ಈ ಪಾತ್ರಕ್ಕಾಗಿ ಉದ್ದ ಗಡ್ಡ ಬಿಟ್ಟಿರುವ ಕಿಟ್ಟಿ, ಕರಿ ಜುಬ್ಬದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಬಹಳ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ಸಹ ಚಿತ್ರದ ಹೈಲೈಟ್‌ಗಳಲ್ಲೊಂದು ಎನ್ನುತ್ತಾರೆ ನಿರ್ಮಾಪಕ ಶಶಿಧರ್.
ಇನ್ನು ‘ವೀರಂ’ ಚಿತ್ರದಲ್ಲಿ ಪ್ರಜ್ವಲ್ ಜತೆಗೆ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು, ಶ್ರೀನಗರ ಕಿಟ್ಟಿ, ‘ಶಿಷ್ಯ’ ದೀಪಕ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬಾಲಿವುಡ್‌ನ ಒಬ್ಬ ಜನಪ್ರಿಯ ನಟ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದು, ಅವರು ಯಾರು ಎಂದು ಸದ್ಯಕ್ಕೆ ಚಿತ್ರತಂಡ ಎಲ್ಲೂ ಬಾಯಿಬಿಟ್ಟಿಲ್ಲ.
ಇದನ್ನೂ ಓದಿ: ಕಿಚ್ಚ ಸುದೀಪ್ ಶೇರ್ ಮಾಡಿದ್ದಾರೊಂದು ಅಪರೂಪದ ಫೋಟೋ!
‘ವೀರಂ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ‘ಖದರ್’ ಕುಮಾರ್. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದರೆ, ಲವಿತ್ ಛಾಯಾಗ್ರಹಣ ಮಾಡಲಿದ್ದಾರೆ. ಕರೊನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.