ನಂಗೊಂದು ಸಿನಿಮಾ ಮಾಡಿಕೊಡಿ ಸಾರ್​ ... ಉಪ್ಪಿಗೆ ಶ್ರೀಮುರಳಿ ಮನವಿ

Srimurali - Final
Published on

'ರಿಯಲ್​ ಸ್ಟಾರ್​' ಉಪೇಂದ್ರ ಅವರ ಅಭಿಮಾನಿ ಬಳಗ ದೊಡ್ಡದು. ಕನ್ನಡ ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಱರು ಉಪೇಂದ್ರ ಅವರ ದೊಡ್ಡ ಅಭಿಮಾನಿಗಳು ಎಂದು ಈಗಾಗಲೇ ಗೊತ್ತಿದೆ. ನಿರ್ದೇಶಕರ ದಿನದ ಅಂಗವಾಗಿ ಇತ್ತೀಚೆಗೆ ಕನ್ನಡದ ಹಲವು ಜನಪ್ರಿಯ ನಿರ್ದೇಶಕರು, ತಾವು ಉಪೇಂದ್ರ ಅವರಿಂದ ಅದೆಷ್ಟು ಸ್ಫೂರ್ತಿಗೊಂಡಿದ್ದೇವೆ ಎಂದು ಹೇಳಿಕೊಂಡಿದ್ದರು.

ಈಗ ನಟ ಶ್ರೀಮುರಳಿ ಸಹ ತಾವು ಉಪೇಂದ್ರ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್​ ಅಭಿನಯದ 'ಸೂಪರ್​ಸ್ಟಾರ್​' ಚಿತ್ರದ ನಾಯಕನ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಶ್ರೀಮುರಳಿ, ಉಪೇಂದ್ರ ಅವರೆಡೆಗಿನ ತಮ್ಮ ಅಭಿಮಾನದ ಬಗ್ಗೆ ಹೇಳಿಕೊಂಡಿದ್ದಾರೆ.

'ನಾನು ಉಪೇಂದ್ರ ಅವರ ಡೈಹಾರ್ಡ್​ ಅಭಿಮಾನಿ. ವಿದ್ಯಾರ್ಥಿಯಾಗಿದ್ದಾಗ, ಉಪೇಂದ್ರ ನಿರ್ದೇಶನದ 'ಓಂ' ಚಿತ್ರವನ್ನು ಬ್ಲಾಕ್​ನಲ್ಲಿ ಟಿಕೇಟ್​ ಖರೀದಿಸಿ ನೋಡಿದ್ದೆ. ಇನ್ನು 'ಎ' ಮತ್ತು 'ಉಪೇಂದ್ರ' ಚಿತ್ರವನ್ನು ಅದೆಷ್ಟು ಬಾರಿ ನೋಡಿದ್ದೀನೋ ಲೆಕ್ಕವಿಲ್ಲ. ಬೇಕಂತಲೇ ಗಾಂಧಿ ಕ್ಲಾಸ್​ನಲ್ಲಿ ಟಿಕೆಟ್​ ತೆಗೆದುಕೊಂಡು ಚಿತ್ರ ನೋಡುತ್ತಿದ್ದೆವು. ಆ ಅನುಭವವನ್ನು ವರ್ಣಿಸುವುದು ಅಸಾಧ್ಯ' ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಉಪೇಂದ್ರ ಅವರ ನಿರ್ದೇಶನದಲ್ಲಿ ಒಂದು ಚಿತ್ರದಲ್ಲಿ ನಟಿಸುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದ ಅವರು. 'ನಂಗೊಂದು ಸಿನಿಮಾ ಕೊಡಿ ಸಾರ್​. ನಿಮ್ಮ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುವ ಆಸೆ ಇದೆ' ಎಂದು ಹೇಳಿಕೊಂಡರು. ಶ್ರೀಮುರಳಿಯವರ ಮನವಿಗೆ ಉಪೇಂದ್ರ ನಗುವಿನಲ್ಲೇ ಉತ್ತರ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net