ಪೇಜಾವರ ಶ್ರೀಗಳಿಂದ ‘ಶ್ರೀ ಜಗನ್ನಾಥ ದಾಸರು’ ಹಾಡುಗಳ ಬಿಡುಗಡೆ ...

Sri Jagannatha Dasaru - Final
Published on

ಬೆಂಗಳೂರು: ‘ಹರಿಕಥಾಮೃತಸಾರ’ವೆಂಬ ಕೃತಿಯನ್ನು ಜಗತ್ತಿಗೆ ನೀಡಿದ, ದಾಸಶ್ರೇಷ್ಠರಲ್ಲೊಬ್ಬರಾದ ಶ್ರೀ ಜಗನ್ನಾಥ ದಾಸರ ಜೀವನ ಚರಿತ್ರೆಯನ್ನಾಧರಿಸಿದ ‘ಶ್ರೀ ಜಗನ್ನಾಥ ದಾಸರು’ ಎಂಬ ಚಿತ್ರ ತೆರೆಗೆ ಬರುತ್ತಿದೆ. ಈ ಭಕ್ತಿಪ್ರಧಾನ ಚಿತ್ರದ ಹಾಡುಗಳನ್ನು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಬಿಡುಗಡೆ ಮಾಡಿ ಆಶೀರ್ವದಿಸಿದರು.

ಈ ವೇಳೆ ಮಾತನಾಡಿದ ಶ್ರೀ ವಿಶ್ವಪ್ರಸನ್ನ ತೀರ್ಥರು, ‘ಮನುಷ್ಯ ಹಾಗೂ ದೇವರ ನಡುವಿನ ಕೊಂಡಿ ಅಂದರೆ ಅದು ಭಕ್ತಿ. ಅಂತಹ ಪರಿಶುದ್ಧ ಭಕ್ತಿಯಿದ್ದರೆ ಮಾತ್ರ ದೇವರು ಒಲಿಯುತ್ತಾನೆ. ನಮಗೆ ಅಂತಹ ಪರಿಶುದ್ಧ ಭಕ್ತಿಯನ್ನು ದೇವರ ಬಳಿ ನಿವೇದಿಸುವುದು ಹೇಗೆ ಎಂಬುದನ್ನು ತಮ್ಮ ಕೃತಿಗಳ ಮೂಲಕ ಜಗನ್ನಾಥದಾಸರು ತೋರಿಸಿಕೊಟ್ಟಿದ್ದಾರೆ. ಅಂತಹ ದಾಸಶ್ರೇಷ್ಠರ ಜೀವನ ಚರಿತ್ರೆ ಚಲನಚಿತ್ರ ರೂಪದಲ್ಲಿ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ’ ಎಂದು ಹೇಳಿದರು.

ಈ ಚಿತ್ರವನ್ನು ಮಧುಸೂದನ್ ಹವಾಲ್ದಾರ್ ನಿರ್ಮಿಸಿ-ನಿರ್ದೇಶಿಸಿದ್ದು, ಸೆಪ್ಟೆಂಬರ್‌ನಲ್ಲಿ ಜಗನ್ನಾಥದಾಸರ ಆರಾಧನೆ ವೇಳೆಗೆ ಚಿತ್ರವನ್ನು ಬಿಡುಗಡೆ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಹೈದರಾಬಾದ್ ಮೂಲದ ಶರತ್ ಜೋಷಿ, ಜಗನ್ನಾಥದಾಸರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿವಿಕ್ರಮ ಜೋಷಿ, ಪ್ರಭಂಜನ ದೇಶಪಾಂಡೆ, ಸುರೇಶ್ ಕಾಣೇಕರ್ ಮುಂತಾದವರು ನಟಿಸಿದ್ದಾರೆ.

ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಹಿರಿಯ ನಿರ್ದೇಶಕ ಭಗವಾನ್, ಅದಮ್ಯ ಚೇತನದ ತೇಜಸ್ವಿನಿ ಅನಂತಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ಉಮೇಶ್ ಬಣಕಾರ್, ಭಾ.ಮ.ಹರೀಶ್ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net