ರಚನಾ ಸಂಗೀತಾ ಅಪೂರ್ವ.. ಢವಢವ

Sandalwood Actress
Published on

ಅದೊಂದು ವಿಚಿತ್ರ ಅನುಭವ. ಕೈಯಲ್ಲಿ ಕೆಲಸ ಇಲ್ಲ ಎನ್ನುವಂತೆಯೂ ಇಲ್ಲ. ಮಾಡಿದ ಚಿತ್ರವನ್ನು ತೆರೆಮೇಲೆ ತೋರಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಇಂಥದ್ದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡದ ಹಲವು ನಟಿಯರಿದ್ದಾರೆ. ಅವರೆಲ್ಲ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿ ದ್ದಾರೆ. ಆ ಚಿತ್ರಗಳು ತಮ್ಮ ವೃತ್ತಿಜೀವನವನ್ನು ಬದಲಿಸಬಹುದು ಎಂದು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಜನ ತಮ್ಮ ಅಭಿನಯದ ಬಗ್ಗೆ ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಕಾಯುವ ಹಂತ ಹೇಗಿದೆ? ಅದನ್ನು ಅವರ ಮಾತಲ್ಲೇ ಕೇಳಿ ...

| ಮಂಜು ಕೊಟಗುಣಸಿ ಬೆಂಗಳೂರು ಥಿಯೇಟರ್​ಗಳಲ್ಲೇ ಉತ್ತರ

ಕೋವಿಡ್ ಮತ್ತು ಲಾಕ್​ಡೌನ್​ನಿಂದ ಅವಕಾಶಗಳು ಕೈತಪು್ಪತ್ತವೆ ಎಂಬ ಅಳುಕಿತ್ತು. ಆದರೆ, ಹಾಗಾಗಲಿಲ್ಲ. ಕೋವಿಡ್ ನಡುವೆಯೂ ನಮ್ಮ ‘ಕೃಷ್ಣ ಟಾಕೀಸ್’ ಸಿನಿಮಾ ಬಿಡುಗಡೆ ಆಯಿತು. ‘ಪೆಂಟಗನ್’ ಚಿತ್ರದಲ್ಲಿ ನಟಿಸಿದೆ. ‘ಪುರುಷೋತ್ತಮ’ ಮುಗಿದು, ದೀಪಾವಳಿಗೆ ಬರಲಿದೆ. ‘ಕಾಲಾಪತ್ಥರ್’ ಚಿತ್ರೀಕರಣ ಪ್ರಾರಂಭವಾಗಿವೆ. ಆದರೆ, ನಾವೇನು ಮಾಡಿದ್ದೇವೆ ಎಂದು ಗೊತ್ತಾಗ ಬೇಕಾದರೆ, ಚಿತ್ರಗಳು ಬಿಡುಗಡೆಯಾಗಬೇಕು. ಥಿಯೇಟರ್ ಮುಂದಿನ ಆ ಸಂಭ್ರಮ, ಪ್ರೇಕ್ಷಕರ ಜೈಕಾರ, ಪಟಾಕಿ ಸದ್ದು ... ಹೀಗೆ ಸಿನಿಮಾ ಕ್ಷೇತ್ರದ ಆ ದಿನಗಳು ಮತ್ತೆ ಮರುಕಳಿಸಬೇಕೆಂದರೆ ಇನ್ನೂ ಒಂದು ವರ್ಷ ಬೇಕೇ ಬೇಕು. ಒಟಿಟಿಯಲ್ಲಿ ಸಿನಿಮಾ ಬಂದಿದೆ ಅಲ್ಲಿಯೇ ನೋಡಿದರಾಯಿತು ಎಂದು ನೋಡಿದರೂ, ಚಿತ್ರಮಂದಿರ ಕೊಡುವ ಅನುಭವವೇ ಬೇರೆ. ನಾನು ಒಬ್ಬ ನಟಿಯಾಗಷ್ಟೇ ಅಲ್ಲ, ಒಬ್ಬ ಪ್ರೇಕ್ಷಕಳಾಗಿಯೂ ಇನ್ನಷ್ಟು ಚಿತ್ರಗಳು ಬಿಡುಗಡೆಯಾಗಲಿ ಎಂದು ಕಾಯುತ್ತಿದ್ದೇನೆ.

| ಅಪೂರ್ವ

ಸಿನಿಮಾದ ಪವರ್ ಗೊತ್ತಾಗಿದೆ

ಲಾಕ್​ಡೌನ್​ಗೂ ಮುನ್ನ ಸಿನಿಮಾ ಅಂದರೆ ಅಷ್ಟಕಷ್ಟೇ ಅನ್ನೋ ಮನಸ್ಥಿತಿ ನನ್ನದಾಗಿತ್ತು. ಏಕೆಂದರೆ, ಆಗ ನಾನು ಕಾಣಿಸಿಕೊಳ್ಳುತ್ತಿದ್ದದ್ದು ಸಣ್ಣಪುಟ್ಟ ಪಾತ್ರಗಳಲ್ಲಿ ಮಾತ್ರ. ಹಾಗಾಗಿ, ಈ ಸಿನಿಮಾ ಸಂಭ್ರಮ ಅಷ್ಟೊಂದಿರಲಿಲ್ಲ. ಯಾವಾಗ ‘ಲವ್ ಮಾಕ್​ಟೇಲ್’ ಸಿನಿಮಾ ಬಿಡುಗಡೆಯಾಯಿತೋ, ಲಾಕ್​ಡೌನ್ ವೇಳೆ ಒಟಿಟಿಯಲ್ಲಿ ಜನಮನ್ನಣೆ ಗಳಿಸಿತೋ, ಆಗ ಸಿನಿಮಾದ ಪವರ್ ಗೊತ್ತಾಯಿತು. ಅದಾದ ಬಳಿಕ ಪೂರ್ಣಪ್ರಮಾಣದ ನಾಯಕಿಯಾಗಿ ‘ತ್ರಿಬಲ್ ರೈಡಿಂಗ್’, ‘ಹರಿಕಥೆ ಅಲ್ಲ ಗಿರಿಕಥೆ’, ‘ಲೆಟ್ಸ್ ಬ್ರೇಕ್ ಅಪ್’, ‘ಲವ್ 360’ ಚಿತ್ರಗಳಲ್ಲಿ ನಟಿಸಿದ್ದೇನೆ. ಅಲ್ಲಿಂದ ಇಲ್ಲಿಯವರೆಗೆ ನಟಿಸುವುದಷ್ಟೇ ನನ್ನ ಕೆಲಸವಾಗಿದೆ. ಒಪ್ಪಿಕೊಂಡ ಚಿತ್ರಗಳ ಶೂಟಿಂಗ್ ಮುಗಿಸಿದ್ದೇನೆ. ಈಗೇನಿದ್ದರೂ ಫಲಾಫಲಗಳ ನಿರೀಕ್ಷೆಯಲ್ಲಿದ್ದೇನೆ. ಜನ ನನ್ನನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬ ಕೌತುಕ ಹೆಚ್ಚಾಗಿದೆ. ತುಂಬಿದ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋಗುತ್ತಿದ್ದ ನಾನು, ಇದೀಗ ನನ್ನ ಸಿನಿಮಾವನ್ನು ಆ ರೀತಿಯಲ್ಲಿ ನೋಡುವ ಉತ್ಸಾಹದಲ್ಲಿದ್ದೇನೆ.

| ರಚನಾ ಇಂದರ್

ಪ್ರತಿಕ್ರಿಯೆ ಮುಖ್ಯ

ನನ್ನ ಸಿನಿಮಾಗಳು ಬಿಡುಗಡೆಯಾಗದೇ 3 ವರ್ಷಗಳಾಗಿವೆ. 2018ರಲ್ಲಿ ತೆರೆಗೆ ಬಂದ ‘ಎ+’ ಚಿತ್ರವೇ ಕೊನೇ. ಅದಾದ ಮೇಲೆ ‘777 ಚಾರ್ಲಿ’ಯಲ್ಲಿಯೇ ಬಿಜಿಯಾದೆ. ಎರಡು ವರ್ಷ ಬೇರೆ ಸಿನಿಮಾಗಳಲ್ಲಿ ನಟಿಸಬಾರ ದೆಂಬ ಒಪ್ಪಂದವೂ ಆಯಿತು. ಯಾವ ಬೇಜಾರಿಲ್ಲದೆ ‘ಚಾರ್ಲಿ’ ಮುಗಿಸಿದೆ. ಅದು ನನ್ನ ಡ್ರೀಮ್ ಪ್ರಾಜೆಕ್ಟ್ ಎಂದರೂ ತಪ್ಪಿಲ್ಲ. ನನ್ನ ಸ್ನೇಹಿತರ ಸಿನಿಮಾಗಳು ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ತೆರೆಕಾಣುತ್ತಿದ್ದವು. ನನಗೆ ಮಾತ್ರ ಚಿತ್ರ ಬಿಡುಗಡೆ ಇಲ್ಲವಲ್ಲ ಎಂಬ ಸಣ್ಣ ಅಳುಕು. ಇದೀಗ ನನ್ನ ನಾಲ್ಕೈದು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಚಾರ್ಲಿ ಮುಗಿದರೆ, ‘ಲಕ್ಕಿ ಮ್ಯಾನ್’ ಸಹ ಕೊನೇ ಹಂತದಲ್ಲಿದೆ. ಎಸ್ ಮಹೇಂದರ್ ನಿರ್ದೇಶನದ ‘ಪಂಪ’, ‘ಮಾರಿಗೋಲ್ಡ್’ ಬಿಡುಗಡೆಯ ಹೊಸ್ತಿಲಲ್ಲಿವೆ. ಸಿನಿಮಾ ಅವಕಾಶಗಳಿಗೂ ಕಡಿಮೆ ಇಲ್ಲ. ಆದರೆ, ಈ ಎಲ್ಲ ಸಿನಿಮಾ ಬಿಡುಗಡೆ ಆಗುವವರೆಗೂ ಬೇರೆ ಚಿತ್ರ ಒಪ್ಪಿಕೊಳ್ಳಬಾರದು ಎಂದುಕೊಂಡಿದ್ದೇನೆ. ಪ್ರೇಕ್ಷಕರ ಪ್ರತಿಕ್ರಿಯೆ ಪಡೆದು ಮುಂದುವರೆಯಬೇಕು ಎನ್ನುವುದು ನನ್ನ ಆಸೆ. ‘ಚಾರ್ಲಿ’ ಚಿತ್ರದ ಮೂಲಕವೇ ಆ ಒಂದು ಆರಂಭ ಶುರುವಾಗಲಿದೆ.

| ಸಂಗೀತಾ ಶೃಂಗೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net