

| ಚೇತನ್ ನಾಡಿಗೇರ್ ಬೆಂಗಳೂರು
ಕಳೆದೊಂದು ವಾರದಲ್ಲಿ ಬೇರೆಬೇರೆ ಭಾಷೆಗಳ ಹಲವು ಚಿತ್ರಗಳ ಬಿಡುಗಡೆ ದಿನಾಂಕ ಘೋಷಣೆ ಯಾಗಿವೆ. ಅಲ್ಲಿಗೆ ಚಿತ್ರರಂಗ ಮತ್ತೆ ಮೊದಲಿನ ಸ್ಥಿತಿಗೆ ಮರಳುತ್ತಿದೆ, ಒಂದರ ಹಿಂದೊಂದು ಚಿತ್ರಗಳು ಬಿಡುಗಡೆಯಾಗಲಿವೆ ಎಂದುಕೊಳ್ಳುವಂತಿಲ್ಲ. ಚಿತ್ರಗಳ ಬಿಡುಗಡೆ ದಿನಾಂಕವೇನೋ ಘೋಷಣೆಯಾಗಿದೆ. ಆದರೆ, ನಿಜಕ್ಕೂ ಆ ದಿನಗಳಂದು ಚಿತ್ರ ಬಿಡುಗಡೆಯಾಗುತ್ತದಾ ಎಂಬ ಗೊಂದಲ ಎಲ್ಲರನ್ನೂ ಕಾಡುತ್ತಿದೆ.
ಕನ್ನಡ ಚಿತ್ರರಂಗದ ಉದಾಹರಣೆಯನ್ನೇ ತೆಗೆದುಕೊಂಡರೆ, ಚಿತ್ರಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿ ಮೂರು ವಾರಗಳಾಗುತ್ತಿವೆ. ಈ ಮೂರು ವಾರಗಳಲ್ಲಿ ಯಾವುದೇ ಹೊಸ ಕನ್ನಡ ಸಿನಿಮಾ ಬಿಡುಗಡೆಯಾಗಿಲ್ಲ. ಇಂದು (ಆ.6) ‘ಕಲಿವೀರ’ ಎಂಬ ಹೊಸ ಚಿತ್ರ ಬಿಡುಗಡೆಯಾಗುತ್ತಿದೆ. ಇನ್ನು ಕಳೆದ ವಾರ, ‘ತಿಮ್ಮರಸು’ ಮತ್ತು ‘ಇಶ್ಕ್’ ಎಂಬ ಎರಡು ತೆಲುಗು ಚಿತ್ರಗಳು ಬಿಡುಗಡೆಯಾಗಿವೆ. ಆಗಸ್ಟ್ 19ಕ್ಕೆ ಅಕ್ಷಯ್ ಕುಮಾರ್ ಅಭಿನಯದ ‘ಬೆಲ್ ಬಾಟಂ’ ಚಿತ್ರ ಬಿಡುಗಡೆಯಾಗುತ್ತಿದೆ. ಲಾಕ್ಡೌನ್ ನಂತರ ಬಿಡುಗಡೆಯಾಗುತ್ತಿರುವ ದೊಡ್ಡ ಬಜೆಟ್ನ ಚಿತ್ರ ಇದಾಗಿದ್ದು, ಈ ಚಿತ್ರವು ಜನರನ್ನು ಚಿತ್ರಮಂದಿರಗಳತ್ತ ಸೆಳೆದು ತರಬಹುದಾ ಎಂಬ ಕುತೂಹಲ ಸಿನಿಮಾ ಪಂಡಿತರದ್ದು. ಆದರೆ, ಈ ಚಿತ್ರ ನಿಜಕ್ಕೂ ಬಿಡುಗಡೆಯಾಗುತ್ತದಾ ಎಂಬ ಗೊಂದಲ ಇದೆ.
ಹಬ್ಬಗಳತ್ತ ಎಲ್ಲರ ಚಿತ್ತ: ಆಷಾಢ ಇನ್ನೇನು ಮುಗಿದು ಶ್ರಾವಣ ಶುರುವಾಗಲಿದೆ. ಶ್ರಾವಣದಲ್ಲಿ ಸಾಲುಸಾಲು ಹಬ್ಬಗಳಿದ್ದು, ಈ ಹಬ್ಬದ ಸೀಸನ್ನಲ್ಲಿ ಹಲವು ದೊಡ್ಡ ಚಿತ್ರಗಳ ಬಿಡುಗಡೆಯನ್ನು ಘೋಷಿಸಲಾಗಿದೆ. ಆದರೆ, ಈ ಗೊಂದಲ ಮತ್ತು ಭಯದಿಂದ ನಿಜಕ್ಕೂ ಘೋಷಣೆಯಾದ ದಿನದಂದೇ ಬಿಡುಗಡೆಯಾಗುತ್ತದಾ ಅಥವಾ ಮುಂದೆ ಹೋಗುವ ಸಾಧ್ಯತೆ ಇದೆಯಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.
ಇದೊಂದು ಜೂಜು...: ಚಿತ್ರ ಪ್ರದರ್ಶನ ಶುರುವಾಗುತ್ತದೋ, ಇಲ್ಲವೋ ಎಂಬುದೇ ಗೊತ್ತಿಲ್ಲ. ಹಾಗಿರುವಾಗ ಯಾವ ಧೈರ್ಯದ ಮೇಲೆ ‘ಬೆಲ್ ಬಾಟಂ’ ಚಿತ್ರದ ಬಿಡುಗಡೆ ಘೋಷಿಸಿದ್ದೀರಿ ಎಂದು ಅಕ್ಷಯ್ ಕುಮಾರ್ ಅವರನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಅವರು, ‘ಇದೊಂದು ಜೂಜು. ಯಾರಾದರೂ ರಿಸ್ಕ್ ತೆಗೆದುಕೊಳ್ಳಲೇ ಬೇಕಿತ್ತು. ಇನ್ನೆಷ್ಟು ದಿನ ಹೀಗೆ ಕಾಯುತ್ತಾ ಇರುವುದು. ಹಾಗಾಗಿ, ನಾವೇ ರಿಸ್ಕ್ ತೆಗೆದುಕೊಂಡಿದ್ದೇವೆ. ಬಿಡುಗಡೆಗೆ ಇನ್ನೆರಡು ವಾರಗಳಿರುವುದಿಂದ, ಅಷ್ಟರಲ್ಲೊಂದು ಚಿತ್ರಣ ಸಿಗಲಿದೆ. ಒಂದು ಪಕ್ಷ ಅಂದುಕೊಂಡ ದಿನ ಬಿಡುಗಡೆಯಾಗದಿದ್ದರೆ, ಮುಂದಕ್ಕೆ ಹೋಗುವ ಸಾಧ್ಯತೆ ಇದೆ’ ಎಂದು ಅವರು ಹೇಳಿಕೊಂಡಿದ್ದಾರೆ.