ಹೆಣ್ಣಿಗೆ ಎಲ್ಲವೂ ಸಾಧ್ಯ...; ರಾಷ್ಟ್ರೀಯ ಪುತ್ರಿಯರ ದಿನ

Ullasa
ಕಾರುಣ್ಯಾ ರಾಮ್, ಭೂಮಿ ಶೆಟ್ಟಿ, ಖುಷಿ ರವಿ, ಸೋನು ಗೌಡ.
Published on

ಇಂದು ರಾಷ್ಟ್ರೀಯ ಪುತ್ರಿಯರ ದಿನ. ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನದ ಬಗ್ಗೆ ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯ ಜನಪ್ರಿಯ ನಟಿಯರು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಹೆಣ್ಣಿಲ್ಲದ ಪ್ರಪಂಚ ಊಹಿಸಲೂ ಅಸಾಧ್ಯ ...

ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಂಡಿರಬೇಕು. ಹೆಣ್ಣನ್ನು ಪೂಜಿಸುವ ದೇಶ ನಮ್ಮದು. ಭೂಮಿ, ಪ್ರಕೃತಿಗೂ ಹೆಣ್ಣನ್ನು ಹೋಲಿಸಲಾಗುತ್ತದೆ. ಹೆಣ್ಣಿಲ್ಲದೆ ಪ್ರಪಂಚವೇ ಇಲ್ಲ. ಅದನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಹೆಣ್ಣಿನಿಂದಲೇ ಜಗತ್ತಿನ ಪ್ರತಿಯೊಂದು ಜೀವರಾಶಿ ಉತ್ಪತ್ತಿ ಸಾಧ್ಯ. ಅಂಥ ಹೆಣ್ಣಿಗೆ ಗೌರವ ಕೊಟ್ಟರೆ ಭೂಮಿಯೂ ತಣ್ಣಗಿರುತ್ತದೆ. ಈ ನಡುವೆ ಕೋವಿಡ್​ನಿಂದ ಸಾಕಷ್ಟು ಬದಲಾವಣೆಗಳಾಗಿವೆ. ಸಾಕಷ್ಟು ಮಹಿಳೆಯರು ಖಿನ್ನತೆಗೊಳಗಾಗಿದ್ದಾರೆ. ಪ್ರಪಂಚ ಮುಗಿದೇ ಹೋಯಿತು ಎಂಬಷ್ಟರ ಮಟ್ಟಿಗೆ ಮನಸ್ಥಿತಿಯನ್ನು ಬದಲಾಯಿಸಿಕೊಂಡಿದ್ದಾರೆ. ಹಾಗಾಗಿ ಅದರಿಂದ ಮೊದಲು ಆಚೆ ಬರಬೇಕು. ಸದಾ ಧನಾತ್ಮಕ ವಿಚಾರಗಳತ್ತ ನಮ್ಮ ಮನಸ್ಸನ್ನು ತೆರೆದಿಡಬೇಕು. ಅಂದಾಗ ಮಾತ್ರ ನಾವು ನಾವಿರಲು ಸಾಧ್ಯ.

| ಕಾರುಣ್ಯಾ ರಾಮ್

ಹೆಣ್ಣನ್ನು ಗೌರವಿಸಬೇಕು

ಹೆಣ್ಣು ಗಂಡಿಗಿಂತ ಯಾವತ್ತಿದ್ದರೂ ಒಂದು ಕೈ ಮೇಲೆಯೇ ಇರುತ್ತಾಳೆ. ಮಗುವಿಗೆ ಜನ್ಮ ನೀಡುವವಳೂ ಹೆಣ್ಣೇ. ತಿಂಗಳಲ್ಲಿ ಮೂರು ದಿನದ ನೋವನ್ನು ಅನುಭವಿಸುವವಳೂ ಹೆಣ್ಣೇ. ಹಾಗಂತ ಗಂಡು ಕೀಳು, ಹೆಣ್ಣು ಮೇಲು ಎಂದು ಹೇಳುತ್ತಿಲ್ಲ. ಎರಡೂ ಒಂದೇ ನಾಣ್ಯದ ಮುಖಗಳಿದ್ದಂತೆ. ಒಂದೇ ವಾಹನದ ಚಕ್ರಗಳಿದ್ದಂತೆ. ಯಾವ ಒಂದು ಚಕ್ರ ಪಂಕ್ಚರ್ ಆದರೂ ಗಾಡಿ ಮುಂದೆ ಹೋಗದು. ಆದರೆ, ಅಲ್ಲಿ ಪರಸ್ಪರ ಗೌರವ ಮುಖ್ಯ. ನಮ್ಮನ್ನು ಅವರು, ಅವರನ್ನು ನಾವು ಗೌರವಿಸಬೇಕು. ಅಂದಾಗ ಮಾತ್ರ ಸಮಾನತೆಯ ವಾಹನ ಸರಿದಾರಿಯಲ್ಲಿಯೇ ಸಾಗಲು ಸಾಧ್ಯ. ಇಂದಿಗೂ ಬಹುತೇಕ ಎಲ್ಲರ ಮನೆಯಲ್ಲಿ ತಾಯಿಯಾದವಳು ಕೊನೆಯಲ್ಲಿಯೇ ಊಟ ಮಾಡುತ್ತಾಳೆ. ಅದು ಆಕೆಯ ಜವಾಬ್ದಾರಿ, ಮನೆ ಮಂದಿಗೆ ನೀಡುವ ಗೌರವ. ಇದನ್ನು ಬಿಟ್ಟರೆ, ಜಾಲತಾಣಗಳಲ್ಲಿ ಹೆಣ್ಣನ್ನು ದೂಷಿಸುವ ಕೆಲಸ ಹೆಚ್ಚಾಗಿ ನಡೆಯುತ್ತಿದೆ. ಬರೀ ಪುರುಷರಷ್ಟೇ ಈ ಕೆಲಸ ಮಾಡುತ್ತಿಲ್ಲ. ಹೆಣ್ಣನ್ನು ಹೆಣ್ಣೇ ದೂಷಿಸುವ ಕೆಲಸವಾಗುತ್ತಿದೆ. ಎದುರುಗಡೆ ಏನು ಕಾಣುತ್ತದೆಯೋ ಅದನ್ನು ನೋಡಿ ಜಡ್ಜ್ ಮಾಡಬೇಡಿ.

| ಭೂಮಿ ಶೆಟ್ಟಿ

ಮಹಿಳೆಗೆ ಇರುವ ಪವರ್ ಯಾರಿಗೂ ಇಲ್ಲ

ಯಾವುದೇ ಕೆಲಸ ಅಂತ ಬಂದರೂ ಪುರುಷನಿಗೆ ಸರಿಸಮನಾಗಿ ಮಹಿಳೆ ನಿಲ್ಲುತ್ತಿದ್ದಾಳೆ. ಶಿಕ್ಷಣದ ವಿಚಾರಕ್ಕೆ ಬಂದರೆ ಪ್ರತಿ ವರ್ಷ ಹುಡುಗಿಯರದ್ದೇ ಮೇಲುಗೈ. ನನಗೂ ಅದೊಂದು ಹೆಮ್ಮೆಯ ವಿಚಾರ. ಮಹಿಳಾ ಸ್ವಾತಂತ್ರ್ಯ ಎಂಬ ವಿಚಾರ ಬಂದಾಗ, ನಮ್ಮ ಮನೆಯಲ್ಲಿ ನಾನು ಫ್ರೀ ಬರ್ಡ್. ನನ್ನ ಕನಸುಗಳಿಗೆ ಮನೆಯವರೇ ರೆಕ್ಕೆಗಳಾಗಿದ್ದಾರೆ. ಆದರೆ, ಇಂದಿಗೂ ಸಾಕಷ್ಟು ಮನೆಗಳಲ್ಲಿ ಹೆಣ್ಣುಮಕ್ಕಳು ಬಂಧಿಯಾಗಿದ್ದಾರೆ. ಅವರ ಸಾಧನೆಯ ಕನಸಿಗೆ ಅಂಕುಶ ಹಾಕಲಾಗುತ್ತಿದೆ. ಹೆಣ್ಣು ಮನೆಗಷ್ಟೇ ಸೀಮಿತ, ನಾಲ್ಕು ಗೋಡೆಯ ಮಧ್ಯೆಯೇ ಅವಳಿರಬೇಕು ಎಂಬ ಕೆಟ್ಟ ಸಂಪ್ರದಾಯ ಆಚರಣೆಯಲ್ಲಿದೆ. ಆಕೆಗೂ ಕನಸುಗಳಿರುತ್ತವೆ. ಸಾಧಿಸಬೇಕಾದ ಸಾಕಷ್ಟು ಆಸೆ, ಗುರಿಗಳಿರುತ್ತವೆ. ಹಾಗಾಗಿ ಅವುಗಳಿಗೂ ಬೆಂಬಲಿಸುವ ಮನಸ್ಸು ಎಲ್ಲರದ್ದಾಗಲಿ.

| ಸೋನು ಗೌಡ

ಹಿಂಜರಿಕೆ ಬೇಡ, ಮುನ್ನುಗುವುದಷ್ಟೇ

ಹೆಣ್ಣಾಗಿ ಹುಟ್ಟಿದ್ದಕ್ಕೆ ನನಗೆ ಖುಷಿ ಇದೆ. ನಮ್ಮ ಅಮ್ಮ ಆಗಲಿ, ಅಜ್ಜಿ ಆಗಲಿ ಪಟ್ಟ ಕಷ್ಟವನ್ನು ನಾವು ಅನುಭವಿಸಿಲ್ಲ. ಆಗಿನ ಕಾಲದಲ್ಲಿನ ವಾತಾವರಣ ಹಾಗಿತ್ತು. ಇದೀಗ ಎಲ್ಲವೂ ಬದಲಾಗಿದೆ. ಎಲ್ಲ ಕೆಲಸವೂ ಹೆಣ್ಣಿನಿಂದ ಸಾಧ್ಯ. ಪ್ರತಿಯೊಂದು ಕ್ಷೇತ್ರದಲ್ಲಿ ಹೆಣ್ಣು ಮುಂದಿದ್ದಾಳೆ. ಈ ವಿಚಾರದಲ್ಲಿ ನನ್ನದೇ ಉದಾಹರಣೆ ಹೇಳಬಹುದು. ಮದುವೆ ಆದ ಸ್ತ್ರೀಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಎಂಬ ಮಾತಿದೆ. ಆದರೆ, ಅದು ನನ್ನ ವಿಷಯದಲ್ಲಿ ತದ್ವಿರುದ್ಧವಾಗಿದೆ. ಕನ್ನಡದ ಜತೆಗೆ ಬೇರೆ ಭಾಷೆಯಲ್ಲಿಯೂ ಅವಕಾಶಗಳು ಅರಸಿ ಬರುತ್ತಿವೆ. ನಮ್ಮ ಬೆಳವಣಿಗೆಗೆ ವಯಸ್ಸು, ಮದುವೆ ಕಾರಣವೇ ಅಲ್ಲ. ಅದನ್ನೇ ಟ್ಯಾಗ್​ಲೈನ್ ಮಾಡಿಕೊಳ್ಳಬಾರದು. ನಾನೀಗ ಇದೆಲ್ಲವನ್ನು ಬ್ರೇಕ್ ಮಾಡಿದ್ದೇನೆ ಎಂಬುದೇ ಖುಷಿಯ ಸಂಗತಿ. ಮದುವೆ ಆಗಿದೆ ಎಂದು ಹಿಂಜರಿಕೆ ಬೇಡ. ಆತ್ಮವಿಶ್ವಾಸ ಬೆಳೆಸಿಕೊಂಡು ಮುನ್ನುಗ್ಗಿದರೆ ಹೆಣ್ಣಿಗೆ ಎಲ್ಲವೂ ಸಾಧ್ಯ. ಇದರ ಜತೆಗೆ ಕುಟುಂಬದ ಬೆಂಬಲವೂ ಹೆಣ್ಣಿಗೆ ಬೇಕು. ಎಷ್ಟೇ ಕಷ್ಟ ಆದರೂ ಕುಟುಂಬ ಇದೆ ಎಂಬ ಧೈರ್ಯವೇ ದೊಡ್ಡದು.

| ಖುಷಿ ರವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net