

ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಕುರಿತು ರವಿ ಶ್ರೀವತ್ಸ ನಿರ್ದೇಶಿಸುತ್ತಿರುವ ‘ಎಂಆರ್’ ಚಿತ್ರಕ್ಕೆ ನಾಯಕಿಯಾಗಿ ಸೌಮ್ಯ ಮೆನನ್ ಎಂಬ ಮಲಯಾಳಿ ಚೆಲುವೆ ಆಯ್ಕೆಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ‘ಕಿನವಳ್ಳಿ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೌಮ್ಯ, ಇದುವರೆಗೂ ಐದು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ‘ಎಂಆರ್’ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಜನವರಿ ಮೊದಲ ವಾರದಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ. ಇದು ಬಯೋಪಿಕ್ ಎನ್ನುವುದಕ್ಕಿಂತ ಮುತ್ತಪ್ಪ ರೈ ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಆಧರಿಸಿ ಚಿತ್ರ ಮಾಡುತ್ತಿರುವುದಾಗಿ ರವಿ ಶ್ರೀವತ್ಸ ಹೇಳುತ್ತಾರೆ. ಇದು ಡಾನ್ ಒಬ್ಬನ ಕಥೆ ಎನ್ನುವುದಕ್ಕಿಂತ ಸಾಮಾನ್ಯ ಮನುಷ್ಯನ ನೋವಿನ ಕಥೆ ಎಂಬುದು ಅವರ ಅಭಿಪ್ರಾಯ.
‘ಬಯೋಪಿಕ್ ಎಂದರೆ ಒಬ್ಬರ ದೃಷ್ಟಿಕೋನವಾಗುತ್ತದೆ. ಇದು ಯಾರೋ ಒಬ್ಬರ ದೃಷ್ಟಿಕೋನದ ಕಥೆಯಲ್ಲ. ಆ ಕಾಲಘಟ್ಟದಲ್ಲಿ ಏನೇನು ಆಯಿತು ಎಂದು ಯಾವುದೇ ಮುಚ್ಚುಮರೆ ಇಲ್ಲದೆ, ಎಲ್ಲವನ್ನು ನೇರವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಒಬ್ಬ ವ್ಯಕ್ತಿಯನ್ನು ಹೇಗೆ ಒಂದು ವ್ಯವಸ್ಥೆ ಚೆನ್ನಾಗಿ ಬಳಸಿಕೊಂಡು ಬಿಸಾಕುತ್ತದೆ ಎಂಬ ಕಥೆಯನ್ನು ನಾನು ಹೇಳುವುದಕ್ಕೆ ಹೊರಟಿದ್ದೇನೆ. ಮುತ್ತಪ್ಪ ರೈ ಕಥೆಯನ್ನು ಮೂರು ಭಾಗಗಳಲ್ಲಿ ಹೇಳುವ ಯೋಚನೆ ಇದೆ. ಮೊದಲ ಭಾಗದಲ್ಲಿ ಮುತ್ತಪ್ಪ ರೈ ಅವರ ಹುಟ್ಟಿನಿಂದ, ಎಂ.ಪಿ. ಜಯರಾಜ್ ಅವರ ಸಾವಿನವರೆಗೂ ಹಲವು ಘಟನೆಗಳನ್ನು ದಾಖಲಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ ರವಿ ಶ್ರೀವತ್ಸ.
ಇಲ್ಲಿ ಮುತ್ತಪ್ಪ ರೈ ಪಾತ್ರವನ್ನು ನವನಟ ದೀಕ್ಷಿತ್ ಮಾಡಿದರೆ, ಜಯರಾಜ್ ಪಾತ್ರದಲ್ಲಿ ನಟರಂಗ ರಾಜೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬೆಕ್ಕಿನ ಕಣ್ಣು ರಾಜೇಂದ್ರ ಪಾತ್ರದಲ್ಲಿ ಅರವಿಂದ್ ರಾವ್, ಆಯಿಲ್ ಕುಮಾರ್ ಪಾತ್ರದಲ್ಲಿ ಪ್ರಶಾಂತ್ ಸಂಬರಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಶೋಭಾ ರಾಜಣ್ಣ ನಿರ್ಮಿಸುತ್ತಿದ್ದು, ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ.