ಅದೊಂದು ಪಾತ್ರ ಜಗದೀಪ್ ಅವರ ಜೀವನವನ್ನೇ ಬದಲಿಸಿತು!

Final - Jagdeep
Published on

ಬಾಲಿವುಡ್‍ನ ಖ್ಯಾತ ಕಾಮಿಡಿ ನಟ ಜಗದೀಪ್ ಅವರು ಗುರುವಾರ ರಾತ್ರಿ ವಯೋಸಹಜ ಸಮಸ್ಯೆಗಳಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಜಗದೀಪ್ ಅವರ ಸಾವಿಗೆ ಅಜಯ್ ದೇವಗನ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಜಗದೀಪ್ ಅವರ ಮೂಲ ಹೆಸರು ಸೈಯ್ಯದ್ ಇಷ್ತಿಯಾಕ್ ಅಹ್ಮದ್ ಜಾಫ್ರಿ. 50ರ ದಶಕದಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಅವರು, ನಂತರದ ವರ್ಷಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದರು. ಒಂದೆರೆಡು ಚಿತ್ರಗಳಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡರು. ಬಿ.ಆರ್. ಚೋಪ್ರಾ ಅವರ `ಅಫ್ಸಾನಾ' ಚಿತ್ರದ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ ಅವರು, `ದೋ ಭೀಘಾ ಜಮೀನ್', `ಆರ್‍ಪಾರ್' ಮುಂತಾದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡರು.

60ರ ದಶಕದಲ್ಲಿ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, `ಬ್ರಹ್ಮಚಾರಿ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ಆದರೆ, ಅವರಿಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟ ಪಾತ್ರ ಎಂದರೆ, ಅದು `ಶೋಲೆ' ಚಿತ್ರದ ಸೂರ್ಮಾ ಭೋಪಾಲಿ ಪಾತ್ರ. ಈ ಪಾತ್ರದಲ್ಲಿನ ಅವರ ಅಭಿನಯ ಅದೆಷ್ಟು ಜನಪ್ರಿಯವಾಯಿತೆಂದರೆ, ನಂತರ ಹಲವು ಚಿತ್ರಗಳಲ್ಲಿ ಅವರಿಗೆ ಅದೇ ತರಹದ ಮ್ಯಾನರಿಸಂನ ಪಾತ್ರ ಸಿಕ್ಕಿತ್ತು. ಈ ಚಿತ್ರದಲ್ಲಿನ ಅವರ ಮಾತನಾಡುವ ಶೈಲಿ ಈಗಲೂ ಅದೆಷ್ಟು ಜನಪ್ರಿಯವಾಗಿದೆಯೆಂದರೆ, ಹಲವು ಕಾರ್ಟೂನ್‍ಗಳಲ್ಲಿನ ಪಾತ್ರಕ್ಕೆ ಅದೇ ಶೈಲಿಯ ಧ್ವನಿ ನೀಡಲಾಗುತ್ತದೆ.

ಸೂರ್ಮಾ ಭೋಪಾಲಿ ಪಾತ್ರ ಹಿಟ್ ಆದ ನಂತರ, ಜಗದೀಪ್ ಅವರು ಅದೇ ಹೆಸರಿನ ಚಿತ್ರ ಮಾಡಿದರು. ಈ ಚಿತ್ರದಲ್ಲಿ ಅವರು ನಾಯಕರಾಗಿದ್ದಷ್ಟೇ ಅಲ್ಲ, ಆ ಚಿತ್ರದ ಮೂಲಕ ನಿರ್ದೇಶಕರೂ ಆದರು. `ಅಂದಾಜ್ ಅಪ್ನಾ ಅಪ್ನಾ', `ಫೂಲ್ ಔರ್ ಕಾಂಟೆ', `ಚೈನಾ ಗೇಟ್' ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು, ಕೊನೆಯದಾಗಿ ನಟಿಸಿದ ಚಿತ್ರದ ಎಂದರೆ ಅದ 2012ರಲ್ಲಿ ಬಿಡುಗಡೆಯಾದ `ಗಲೀ ಗಲೀ ಮೇ ಚೋರ್ ಹೈ'. ಆ ನಂತರ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಅವರ ಮಗ ಜಾವೇದ್ ಜಾಫ್ರಿ, ನಟನೆ ಮತ್ತು ನಿರೂಪಣೆಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.

ಜಗದೀಪ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಮುಂಬೈನಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net