ಅಮ್ಮನ ಕನಸನ್ನು ಈಗ ನನಸು ಮಾಡ್ತಿದ್ದಾರಂತೆ ಸೋನು!

Sonu-Sood-Final-4
Published on

ಸೋನು ಸೂದ್ ಲಾಕ್‍ಡೌನ್ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿರುವುದು ಗೊತ್ತೇ ಇದೆ. ಈಗಾಗಲೇ ಅವರು ಈ ಕುರಿತು ಅಧಿಕೃತವಾಗಿ ಘೋಷಿಸಿದ್ದು, ಬಹುಶಃ ಈ ವರ್ಷದ ಕೊನೆಯ ಹೊತ್ತಿಗೆ ಪುಸ್ತಕ ಬಿಡುಗಡೆಯಾಗುವ ಸಾಧ್ಯತೆ ಇದೆ.

ಈ ಪುಸ್ತಕದ ಮೂಲಕ ಅಮ್ಮನ ಕನಸ್ಸನ್ನು ನನಸು ಮಾಡುತ್ತಿರುವುದಾಗಿ ಸೋನು ಹೇಳಿಕೊಂಡಿದ್ದಾರೆ. ಈ ಕುರಿತ ಮಾತನಾಡಿರುವ ಅವರು, `ಬದುಕಿನ ಸುಂದರ ಮತ್ತು ಮೆಮೊರಬಲ್ ಆದ ಕ್ಷಣಗಳನ್ನು ಪುಸ್ತಕ ಬರೆದಿಡು ಎಂದು ನನ್ನ ಅಮ್ಮ ಯಾವಾಗಲೂ ಹೇಳುತ್ತಿದ್ದರು. ನಾನು ಬರೆಡಿಡುವುದಕ್ಕೆ ಹೋಗಲಿಲ್ಲ. ಅಮ್ಮ ನಿಧನರಾದ ನಂತರ, ಬರೆಯುವುದಕ್ಕೆ ಪ್ರಾರಂಭ ಮಾಡಿದೆ. ಈಗ ಲಾಕ್‍ಡೌನ್ ಅನುಭವಗಳನ್ನು ಪುಸ್ತಕ ಮಾಡುತ್ತಿದ್ದೇನೆ. ನಮ್ಮ ತಾಯಿ ಇದ್ದಿದ್ದರೆ ಅದೆಷ್ಟು ಖುಷಿಪಡುತ್ತಿದ್ದರೋ' ಎಂದು ಹೇಳಿಕೊಂಡಿದ್ದಾರೆ ಸೋನು.

ತಮ್ಮ ತಾಯಿಗೆ ಓದುವುದೆಂದರೆ ಬಹಳ ಇಷ್ಟ ಎಂದು ಹೇಳಿರುವ ಅವರು, `ಅಮ್ಮನಿಗೆ ಪುಸ್ತಕ ಓದುವ ಹವ್ಯಾಸ ಇತ್ತು. ನನ್ನ ಪುಸ್ತಕವನ್ನು ಓದಿದ್ದರೆ ಎಷ್ಟು ಚೆನ್ನಾಗಿರುತಿತ್ತು. ನಾನು ಇವತ್ತು ಬರೆದಿದ್ದೇನೆ ಎಂದರೆ, ಅದಕ್ಕೆ ಕಾರಣ ಅವರೇ. ನಾನು ಪುಸ್ತಕದ ಬಗ್ಗೆ ಮಾತನಾಡುವಾಗ, ಅಮ್ಮನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಅಮ್ಮ ಓದುತ್ತಿದ್ದ ಪುಸ್ತಕಗಳನ್ನೆಲ್ಲಾ ಇನ್ನೂ ಜೋಪಾನವಾಗಿ ಇಟ್ಟುಕೊಂಡಿದ್ದೇನೆ.

ಪಂಜಾಬ್‍ನ ನಮ್ಮ ಮನೆಯಲ್ಲಿ ಆ ಪುಸ್ತಕಗಳು ಇನ್ನೂ ಇವೆ. `ನಾನು ಇಲ್ಲದಿದ್ದರೂ ಪುಸ್ತಕಗಳನ್ನು ಜೋಪಾನವಾಗಿಟ್ಟುಕೋ ಮಗಾ. ಏಕೆಂದರೆ, ಇದು ನಾನು ಮಾಡಿಟ್ಟ ಆಸ್ತಿ ಮತ್ತು ಆ ಆಸ್ತಿ ನಿನಗೆ ಸಲ್ಲಬೇಕು' ಎಂದು ಅಮ್ಮ ಹೇಳುತ್ತಿದ್ದರು' ಎಂದು ನೆನಪಿಸಿಕೊಂಡಿದ್ದಾರೆ ಸೋನು.

ಆ ಎಲ್ಲಾ ಪುಸ್ತಕಗಳ ಜತೆಗೆ ತಮ್ಮ ಹೊಸ ಪುಸ್ತಕ ಸಹ ಸೇರಿಕೊಳ್ಳುತ್ತದೆ ಎಂದು ಖುಷಿ ವ್ಯಕ್ತಪಡಿಸುವ ಸೋನು, ಆದಷ್ಟು ಬೇಗ ಪುಸ್ತಕವನ್ನು ಮಾರುಕಟ್ಟೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ, ಅಗತ್ಯವಿರುವವರಿಗೆ ಸಹಾಯ ಮಾಡುವ ಕೆಲಸವನ್ನು ಸೋನು ಮುಂದುವರೆಯುತ್ತಿದ್ದು, ಇತ್ತೀಚೆಗೆ ಅವರೇ ಹೇಳಿಕೊಂಡಂತೆ, ಪ್ರತಿ ದಿನ 32 ಸಾವಿರ ಮನವಿಗಳು ಅವರಿಗೆ ಇಮೇಲ್, ಟ್ವಿಟರ್ ಮತ್ತು ಫೇಸ್‍ಬುಕ್ ಮೂಲಕ ಬರುತ್ತಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net