ರಾಜಕೀಯಕ್ಕೆ ಎಂಟ್ರಿ ಕೊಡೋದಕ್ಕೆ ಇಷ್ಟೆಲ್ಲಾ ಮಾಡ್ತಿದ್ದಾರಾ ಸೋನು ಸೂದ್​?

Sonu Sood - Final
Published on

ಲಾಕ್​ಡೌನ್​ ಶುರುವಾದ ಮೇಲೆ ಬಾಲಿವುಡ್​ ನಟ ಸೋನು ಸೂದ್​ ತಮ್ಮದೇ ರೀತಿಯಲ್ಲಿ ಒಂದಲ್ಲಾ ಒಂದು ಸಹಾಯವನ್ನು ಮಾಡುತ್ತಲೇ ಬಂದಿದ್ದಾರೆ. ಸೋಂಕಿತರಿಗೆ ಕ್ವಾರಂಟೈನ್​ ಮಾಡುವುದಕ್ಕೆ ಮೊದಲು ತಮ್ಮ ಹೋಟೆಲ್​ ಬಿಟ್ಟು ಕೊಟ್ಟರು, ನಂತರ ವಲಸೆ ಕಾರ್ಮಿಕರಿಗೆ ಬಸ್​ ಮಾಡಿ ತಮ್ಮ ತವರೂರಿರಿಗೆ ಕಳಸಿಕೊಟ್ಟರು, ತುಂಬಾ ದೂರ ಇರುವವರನ್ನು ಏರ್​ಲಿಫ್ಟ್​ ಸಹ ಮಾಡಿಸಿದರು. ಹೀಗೆ ಸತತವಾಗಿ ಸಾವಿರಾರು ಜನರಿಗೆ ಸಹಾಯವಾಗುವಂತಹ ಕೆಲಸ ಮಾಡುತ್ತಲೇ ಇದ್ದಾರೆ.

ಎಲ್ಲಾ ಸರಿ, ಅವರು ಇಷ್ಟೆಲ್ಲಾ ಮಾಡುತ್ತಿರುವುದರ ಹಿಂದೆ ದುರುದ್ದೇಶವಿದೆಯಾ?ಈ ಸಹಾಯವನ್ನು ಮುಂದಿಟ್ಟುಕೊಂಡು ಮುಂದೊಂದು ದಿನ ರಾಜಕೀಯ ಪ್ರವೇಶ ಮಾಡುತ್ತಾರಾ? ರಾಜಕೀಯ ಪಕ್ಷ ಸೇರುವುದಕ್ಕೆ ಇದನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರಾ? ಎಂಬ ಹಲವು ಪ್ರಶ್ನೆಗಳಿವೆ.

ಇದಕ್ಕೆ ಸರಿಯಾಗಿ ಶಿವಸೇನಾ ಸಂಸದ ಸಂಜಯ್​ ರೌತ್​ ಇತ್ತೀಚೆಗೆ ಮಾತನಾಡುವಾಗ, ಸೋನು ಸೂದ್​ ಅವರು ಭಾರತೀಯ ಜನತಾ ಪಕ್ಷದ ಏಜೆಂಟ್​ ಎಂದು ಹೇಳಿದ್ದರು. ಬಿಜೆಪಿ ಕುಮ್ಮಕ್ಕಿನಿಂದಲೇ ಸೋನು ಸೂದ್​ ಹೀರೋ ಆಗುವುದಕ್ಕೆ ಹೊರಟಿದ್ದಾರೆ ಎಂದು ಕಾಲೆಳೆದಿದ್ದರು.

ಆದರೆ, ಇದೆಲ್ಲಾ ಶುದ್ಧ ಸುಳ್ಳು, ತಮಗೆ ರಾಜಕೀಯಕ್ಕೆ ಬರುವುದಕ್ಕೆ ಯಾವುದೇ ಆಸೆ ಇಲ್ಲ ಎಂದು ಸ್ವತಃ ಸೋನು ಸೂದ್​ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ವಲಸೆ ಕಾರ್ಮಿಕರ ಮೇಲಿನ ಪ್ರೀತಿಯಿಂದ ಅವರನ್ನು ತಮ್ಮ ತವರೂರಿಗೆ ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ. ಅದರಿಂದ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಸೂದ್​ ಸ್ಪಷ್ಟಪಡಿಸಿದ್ದಾರೆ.

ನಾನು ಒಬ್ಬ ವಲಸೆ ಕಾರ್ಮಿಕ. ಹಲವು ವರ್ಷಗಳ ಹಿಂದೆ ಕನಸುಗಳನ್ನು ಹೊತ್ತು, ರೈಲಿನಲ್ಲಿ ಬಂದು ಮುಂಬೈನಲ್ಲಿ ಇಳಿದೆ. ಇವರನ್ನೆಲ್ಲಾ ನೋಡಿದರೆ, ನನಗೆ ನನ್ನ ಸ್ಟ್ರಗಲ್​ ನೆನಪಿಗೆ ಬರುತ್ತದೆ. ಆರಂಭದಲ್ಲಿ ಇಲ್ಲಿರುವುದಕ್ಕೆ ನನಗೆ ತುಂಬಾ ಕಷ್ಟವಾಗಿತ್ತು. ಕ್ರಮೇಣ ಈ ಪರಿಸ್ಥಿತಿಗೆ ಹೊಂದಿಕೊಂಡೆ. ಇವತ್ತು ಇಲ್ಲೇ ನೆಲೆಸಿದ್ದೇನೆ. ಮೇ 9ರಂದು ನಾನು ಕಾರ್ಮಿಕರಿಗೆ ಊಟ ಹಂಚುತ್ತಿದ್ದಾಗ, ಅವರ ಸಮಸ್ಯೆಯ ಬಗ್ಗೆ ಅರಿವಾಯಿತು. ಅವರಿಂದಾಗಿ ಇಂದು ಮುಂಬೈನಲ್ಲಿ ಇಷ್ಟೊಂದು ರೋಡು, ಬಿಲ್ಡಿಂಗುಗಳು ಎದ್ದು ನಿಂತಿವೆ. ನಮ್ಮ ಕಷ್ಟಕ್ಕೆ ಅವರಾದಾಗ, ಅವರ ಕಷ್ಟಕ್ಕೆ ನಾವಾಗದಿದ್ದರೆ ಹೇಗೆ? ಅವರನ್ನು ಹೀಗೆ ರೋಡಿನಲ್ಲಿ ಬಿಟ್ಟುಬಿಡುವುದಕ್ಕೆ ಹೇಗೆ ಸಾಧ್ಯ. ಈ ವಿಷಯ ನನ್ನನ್ನು ತುಂಬಾ ಕಾಡಿತು. ಅದೇ ಕಾರಣಕ್ಕೆ ವಲಸೆ ಕಾರ್ಮಿಕರು, ತಮ್ತಮ್ಮ ಊರುಗಳಿಗೆ ಹೋಗುವುದಕ್ಕೆ ನಾನು ವ್ಯವಸ್ಥೆ ಮಾಡಿಕೊಟ್ಟೆ ಎಂದು ಸೋನು ಸೂದ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net