

ಕಳೆದ ಕೆಲವು ತಿಂಗಳುಗಳಿಂದ ಸೋನು ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೋ, ಲೆಕ್ಕ ಇಡುವುದು ಕಷ್ಟ. ಹಸಿವು ಎಂದವರಿಗೆ ಊಟ ಹಾಕಿದರು. ಊರಿಗೆ ಹೋಗಬೇಕು ಎಂದವರಿಗೆ ಊರಿಗೆ ತಲುಪಿಸಿದರು. ಕೆಲಸ ಇಲ್ಲ ಎಂದವರಿಗೆ ಕೆಲಸ ಕೊಡಿಸಿದರು. ತಮ್ಮ ಕೈಲಾಗಿದ್ದನ್ನು ಮಾಡುತ್ತಲೇ ಬಂದಿರುವ ಸೋನು, ಈ ಬಾರಿ ಅಭಿಮಾನಿಯೊಬ್ಬನ ಮನವಿಯನ್ನು ತಿರಸ್ಕರಿಸಿದ್ದಾರೆ.
ಸೋನು ಅವರ ಅಭಿಮಾನಿಯೊಬ್ಬ, ಅವರಿಂದ ಒಂದು ಸಹಾಯ ಕೇಳಿದ್ದ. ಅದನ್ನು ಸೋನು ತಿರಸ್ಕರಿಸಿದ್ದಾರೆ. ಇಷ್ಟಕ್ಕೂ ಆ ಅಭಿಮಾನಿ ಕೇಳಿದ್ದಾದರೂ ಏನನ್ನು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಸೋನು ಅವರ ಅಭಿಮಾನಿ, ಪ್ಲೇಸ್ಟೇಶನ್ 4 ಕೊಡಿಸುವಂತೆ ಮನವಿ ಸಲ್ಲಿಸಿದ್ದ.
ಈ ಕುರಿತು ಟ್ವೀಟ್ ಮಾಡಿದ್ದ ಆತ, 'ನನಗೆ ಒಂದು ಪಿಎಸ್ 4 ಕೊಡಿಸೋದಕ್ಕೆ ಸಾಧ್ಯವಾ? ನನ್ನ ಎಲ್ಲಾ ಸ್ನೇಹಿತರು ಲಾಕ್ಡೌನ್ನಲ್ಲಿ ಗೇಮ್ಸ್ ಆಡುತ್ತಾ ಮಜಾ ಮಾಡುತ್ತಿದ್ದಾರೆ. ಬಹಳ ಬೋರ್ ಆಗುತ್ತಿದೆ. ನೀವು ನನಗೆ ಪಿಎಸ್ 4 ಕೊಡಿಸಿ' ಎಂದು ಹೇಳಿದ್ದ.
ಇದಕ್ಕೆ ಪ್ರತಿಕ್ರಿಯಿಸಿರುವ ಸೋನು, 'ನಿಜ ಹೇಳಬೇಕೆಂದರೆ, ಪಿಎಸ್ ಇಲ್ಲದಿರುವುದೇ ನಿನಗೊಂದು ವರ. ಒಂದಿಷ್ಟು ಪುಸ್ತಕ ಓದು. ಬೇಕಾದರೆ, ಪುಸ್ತಕ ಕೊಡಿಸಬಲ್ಲೆ ' ಎಂದು ಅವರು ಉತ್ತರಿಸಿದ್ದಾರೆ.
ಇದನ್ನೂ ಓದಿ: ಹೊಸ ದಾಖಲೆ ಬರೆದ ಮಮ್ಮೂಟ್ಟಿ … ಏನ್ ಗೊತ್ತಾ ಅದು?
ಇದಕ್ಕೆ ಸೋನು ಅವರ ಹಲವು ಅಭಿಮಾನಿಗಳು ಸಹ ಅನುಮೋದನೆಯನ್ನು ನೀಡಿದ್ದಾರೆ. ನಿಜ, ವಿಡಿಯೋ ಗೇಮ್ ಆರೋಗ್ಯಕ್ಕೆ ಹಾನಿಕರ ಎಂದು ಹಲವರು ಉತ್ತರ ಕೊಟ್ಟಿದ್ದಾರೆ.