ಹ್ಯಾಪಿ ಬರ್ಥ್​ಡೇ ಹೇಳೋಕೆ ಒಬ್ಬರೇ ಒಬ್ಬರು ಇರಲಿಲ್ಲ ... ಸೋನು ಭಾವುಕ ನುಡಿ

Sonu Sood - Final
Published on

ಬಾಲಿವುಡ್​ ನಟ ಸೋನು ಸೂದ್​ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಲಸೆ ಕಾರ್ಮಿಕರಿಗೆ ಸಹಾಯ ಮಾಡಿ, ಭಾರತದ ಉದ್ದಗಲಕ್ಕೂ ಜನಪ್ರಿಯತೆ ಪಡೆದಿರುವ ಸೋನುಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಸೋನು ಅವರ ನೆರವಿನಿಂದ ದೂರದ ತಮ್ಮ ಊರುಗಳಿಗೆ ವಾಪಸ್ಸಾಗಿರುವ ವಲಸೆ ಕಾರ್ಮಿಕರೆಲ್ಲಾ, ಇಂದು ಸೋನುಗೆ ತಮ್ಮದೇ ರೀತಿಯಲ್ಲಿ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ. ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಹೇಳಿದರೆ, ಇನ್ನೂ ಕೆಲವರು ವಿಡಿಯೋ ಕಾಲ್​ ಮಾಡುತ್ತಿದ್ದಾರೆ ಎಂದು ಸೋನು ಹೇಳಿಕೊಂಡಿದ್ದಾರೆ.

ಆದರೆ, ತಾನು ಮುಂಬೈಗೆ ಬಂದ ಹೊಸತರಲ್ಲಿ ತನ್ನ ಜತೆಗೆ ಯಾರೂ ಇರಲಿಲ್ಲ ಎಂದು ಸೋನು ನೆನಪಿಸಿಕೊಂಡಿದ್ದಾರೆ. '22 ವರ್ಷಗಳ ಹಿಂದೆ, ಹುಟ್ಟುಹಬ್ಬಕ್ಕಿಂತ ನಾಲ್ಕು ದಿನಗಳ ಮುಂಚಿತವಾಗಿ ಮುಂಬೈಗೆ ಮೊದಲ ಬಾರಿಗೆ ಬಂದೆ. ನನಗೆ ಇಲ್ಲಿ ಯಾರೊಬ್ಬರೂ ಪರಿಚಯವಿರಲಿಲ್ಲ. ಏನು ಮಾಡಬೇಕೆಂದು ಗೊತ್ತಿರಲಿಲ್ಲ. ಮಧ್ಯರಾತ್ರಿ ಮನೆಯಿಂದ ಅಪ್ಪ-ಅಪ್ಪ ಮತ್ತು ಸಹೋದರಿ ಫೋನ್​ ಮಾಡಿ ವಿಶ್​ ಮಾಡಿದರು. ಆ ಸಂದರ್ಭದಲ್ಲಿ ನನಗೆ ನಿಜಕ್ಕೂ ಕಣ್ಣಲ್ಲಿ ನೀರು ಬಂದಿತ್ತು' ಎಂದು ನೆನಪಿಸಿಕೊಂಡಿದ್ದಾರೆ ಸೋನು.

'ಅಪ್ಪ-ಅಮ್ಮ ಫೋನ್​ ಮಾಡಿದಾಗ, ಯಾರಾದರೂ ಸ್ನೇಹಿತರಾಗಿದ್ದಾರಾ ಎಂದು ಕೇಳಿದರು. ನಾನು ಇಲ್ಲ ಎಂದೆ. ನಿಜಕ್ಕೂ ನಾನು ಆಗ ಒಬ್ಬಂಟಿಯಾಗಿದ್ದೆ. ಈ ಊರಿನಲ್ಲಿ ಲಕ್ಷಲಕ್ಷ ಜನರಿದ್ದಾರೆ. ಆದರೆ, ನನಗೆ ಶುಭಾಶಯ ಹೇಳುವುದಕ್ಕೆ ಒಬ್ಬೇ ಒಬ್ಬರಿಲ್ಲ. ಆಗಲೇ ನಾನು ದೊಡ್ಡ ಹೆಸರು ಮಾಡಬೇಕು ಎಂದು ನಿರ್ಧಾರ ಮಾಡಿದೆ. ನನ್ನ ಹುಟ್ಟುಹಬ್ಬಕ್ಕೆ ಜನ ನನಗೆ ವಿಶ್​ ಮಾಡುವಂತೆ ಬೆಳೆಯಬೇಕು ಎಂದು ತೀರ್ಮಾನಿಸಿದೆ' ಎಂದು ಅವರು ಹೇಳಿಕೊಂಡಿದ್ದಾರೆ.

ಅದಾಗಿ 22 ವರ್ಷಗಳ ನಂತರ ತಮ್ಮ ಕನಸು ನನಸಾಯಿತು ಎಂದು ಹೇಳಿಕೊಂಡಿರುವ ಅವರು, 'ಇಂದು ನನ್ನ ಹುಟ್ಟುಹಬ್ಬವನ್ನು ಎಲ್ಲರೂ ಆಚರಿಸುತ್ತಿದ್ದಾರೆ ಮತ್ತು ನನಗೆ ಶುಭಾಶಯ ಕೋರುತ್ತಿದ್ದಾರೆ. ಹಾಗಾಗಿ ನನ್ನ ಪಾಲಿಗೆ ಇದು ವಿಶೇಷವಾದ ದಿನ' ಎಂದು ಹೇಳಿಕೊಂಡಿದ್ದಾರೆ ಸೋನು.

ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬದ ದಿನ ಏನಾದರೊಂದು ಹೊಸ ರೆಸಲ್ಯೂಶನ್​ ಕೈಗೊಳ್ಳುತ್ತಾರೆ. ಸೋನು ಇನ್ನು ಮುಂದೆ ಜನರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ತೀರ್ಮಾನಿಸಿದ್ದಾರಂತೆ. 'ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯತ್ವ ಮುಖ್ಯ. ಬಹಳಷ್ಟು ಜನರಿಗೆ ತಮ್ಮದೇ ಆದ ಕಷ್ಟಗಳಿವೆ. ಅವರಿಗೆ ನೆರವಿನ ಅವಶ್ಯಕತೆ ಇದೆ. ನಾನು ನಿನ್ನ ಜತೆಗೇ ಇದ್ದೇನೆ ಹೆದರಬೇಡ ಎಂದು ಹೇಳುವವರು ಸಿಗಲಿ ಎಂದು ಕಾಯುವವರಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಶಕ್ತ್ಯಾನುಸಾರ ಇತರರಿಗೆ ಸಹಾಯ ಮಾಡಲಿ ಎನ್ನುವುದು ನನ್ನ ಆಸೆ. ನಾನಂತೂ ಇದನ್ನು ಮುಂದುವರೆಸುತ್ತೇನೆ' ಎಂದು ಸೋನು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net