

ಬಾಲಿವುಡ್ ನಟ ಸೋನು ಸೂದ್, ಕಳೆದ ಕೆಲವು ತಿಂಗಳುಗಳು ಅಷ್ಟೆಲ್ಲಾ ಸುದ್ದಿಯಲ್ಲಿದ್ದರೂ, ಅವರ್ಯಾವತ್ತೂ ಸುಶಾಂತ್ ಸಾವಿನ ಕುರಿತು ಮಾತನಾಡಿರಲಿಲ್ಲ. ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳಿಸುವುದರಲ್ಲಿ ಬ್ಯುಸಿಯಾಗಿದ್ದ ಸೋನು, ಇದೀಗ ಮೊದಲ ಬಾರಿಗೆ ಸುಶಾಂತ್ ಸಾವಿನ ಕುರಿತಾಗಿ ಮಾತನಾಡಿದ್ದಾರೆ.
ಸುಶಾಂತ್ ಸಾವಿನ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಸುಶಾಂತ್ ಸಾವಿನ ವಿಷಯದಲ್ಲಿ ಹಲವರು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ಸುಮ್ಮನೆ ಅವರ ಕುಟುಂಬದವರ ಬಗ್ಗೆ ಯೋಚಿಸಿ. ಅವರೆಲ್ಲೋ ಪಟ್ನಾದಲ್ಲಿದ್ದಾರೆ. ಅವರ ಮನಸ್ಸಿಗೆ ಈ ಎಲ್ಲಾ ವಿಷಯಗಳಿಂದ ಅದೆಷ್ಟು ಘಾಸಿಯಾಗುತ್ತಿರಬಹುದು ಯೋಚಿಸಿ. ವಿಚಿತ್ರ ಎಂದರೆ, ಸುಶಾಂತ್ ಅವರನ್ನು ಒಮ್ಮೆಯೂ ಭೇಟಿ ಮಾಡದವರು ಸಹ ಇಂದು ಕುಳಿತು ದೊಡ್ಡ ಚರ್ಚೆ ಮಾಡುತ್ತಿದ್ದಾರೆ' ಎಂದು ಬೇಸರಿಸಿಕೊಂಡಿದ್ದಾರೆ.
ಸುಶಾಂತ್ ಸಾವಿನಲ್ಲಿ ಮೈಲೇಜ್ ತೆಗೆದುಕೊಳ್ಳುವ ವಿಷಯವಾಗಿ ಹಲವರು ಮಾತನಾಡಿದ್ದಾರೆ. ಸುಶಾಂತ್ ಸಿಂಗ್ ಅವರನ್ನು ಮುಂದಿಟ್ಟುಕೊಂಡು ಏನೇನೋ ವಿಷಯಗಳನ್ನು ಚರ್ಚೆ ಮಾಡುವುದನ್ನು ಬಿಡಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈಗ ಸೋನು ಸಹ ಈ ಸಾಲಿಗೆ ಸೇರಿದ್ದಾರೆ.
ಇಷ್ಟಕ್ಕೂ ಸೋನು ಮಾತನಾಡಿದ್ದು ಯಾರ ಬಗ್ಗೆ ಎಂಬ ಚರ್ಚೆ ಇದೀಗ ಶುರುವಾಗಿದೆ. ಸೋನು ಮಾತುಗಳು ಅಕ್ಷರಶಃ ನಿಜವಾದರೂ, ಅವರು ಈ ವಿಷಯದಲ್ಲಿ ಯಾರನ್ನೋ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಂಗನಾ ಅವರನ್ನೇ ಗಮನದಲ್ಲಿಟ್ಟುಕೊಂಡು, ಸೋನು ಈ ವಿಷಯವನ್ನು ಮಾತಾಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ, 'ಮಣಿಕರ್ಣಿಕಾ' ಸಿನಿಮಾದ ವಿಷಯವಾಗಿ ಸೋನು ಮತ್ತು ಕಂಗನಾ ನಡುವೆ ದೊಡ್ಡ ಯುದ್ಧ ಆಗಿತ್ತು. ಆ ಚಿತ್ರದಲ್ಲಿ ಸೋನು ಸಹ ಪ್ರಮುಖ ಪಾತ್ರ ವಹಿಸಿದ್ದರು. ಯಾವಾಗ, ಚಿತ್ರದ ನಿರ್ದೇಶಕರನ್ನು ಕಂಗನಾ ಕಿತ್ತು ಬಿಸಾಕಿದರೋ, ಆಗ ಸೋನು ಸಹ ಚಿತ್ರದಿಂದ ಹೊರನಡೆದರು.
ಚಿತ್ರದಿಂದ ಸೋನು ಹೊರನಡೆದಿದ್ದರ ಬಗ್ಗೆ ಕಂಗನಾ ಕಿಡಿಕಾರಿದ್ದರು. ಅಷ್ಟೇ ಅಲ್ಲ, ಅವರ ಪಾತ್ರವನ್ನು ಕಡಿಮೆ ಮಾಡಿದ್ದರು. ಆ ನಂತರ ಇಬ್ಬರೂ ದೂರವಾದರು. ಈಗ ಸೋನು, ಸುಶಾಂತ್ ಸಾವಿನ ಬಗ್ಗೆ ಮಾತನಾಡಿದ್ದಾರೆ. ಈ ವಿಷಯದಲ್ಲಿ ತಮ್ಮನ್ನು ಸೋನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಂಗನಾ ಯಾವಾಗ ತಿರುಗಿ ಬೀಳುತ್ತಾರೋ ಎಂಬ ಕುತೂಹಲ ಎಲ್ಲರಲ್ಲೂ ಇದೆ.