

ಮುಂಬೈ: ಲಾಕ್ಡೌನ್ ಸಮಯದಲ್ಲಿ ಹಲವು ವಲಸೆ ಕಾರ್ಮಿಕರನ್ನು ತಮ್ಮ ಸ್ವಂತ ರಾಜ್ಯಗಳಿಗೆ ಏರೋಪ್ಲೇನ್ ಮೂಲಕ ಸೋನು ಸೂದ್ ಕಳುಹಿಸಿಕೊಟ್ಟಿದ್ದು ಎಲ್ಲರಿಗೂ ನೆನಪಿರಬಹುದು. ಈಗ ಅವರು ಅಭಿಮಾನಿಯೊಬ್ಬನನ್ನು ಏರ್ಲಿಫ್ಟ್ ಮಾಡಿಸಿಕೊಂಡು ಮುಂಬೈಗೆ ಕರೆಸಿಕೊಳ್ಳುತ್ತಿದ್ದಾರೆ.
ಸೋನು ಸೂದ್ ಅವರ ಅಭಿಮಾನಿಯೊಬ್ಬ ಅವರನ್ನು ಭೇಟಿ ಮಾಡುವುದಕ್ಕೆ ಬಿಹಾರದಿಂದ ಮುಂಬೈಗೆ ಸೈಕಲ್ನಲ್ಲಿ ಬರುವುದಾಗಿ ಹೇಳಿಕೊಂಡಿದ್ದ. ಅಷ್ಟೇ ಅಲ್ಲ, ವಾರಣಾಸಿಯವರೆಗೂ ಬಂದಿದ್ದನಂತೆ. ಈ ವಿಷಯ ತಿಳಿದ ಸೋನು, ಆತನನ್ನು ಏರೋಪ್ಲೇನ್ ಮೂಲಕ ಕರೆಸಿಕೊಳ್ಳುತ್ತಿರುವುದು ವಿಶೇಷ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನು, 'ನಾನು ಅರ್ಮಾನ್ ಅವರನ್ನು ಸಂಪರ್ಕಿಸಿದ್ದೇನೆ. ನನ್ನನ್ನು ಭೇಟಿ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಈ ರೀತಿ ಜೀವವನ್ನು ಪಣಕ್ಕಿಟ್ಟು ಬರುವುದು ಸರಿಯಲ್ಲ ಎಂದು ಅರ್ಥ ಮಾಡಿಸಿದೆ. ಅಷ್ಟೇ ಅಲ್ಲ, ಫ್ಲೈಟ್ನಲ್ಲಿ ಬರುವುದಕ್ಕೆ ವ್ಯವಸ್ಥೆ ಮಾಡಿದ್ದೇನೆ. ಮುಂಬೈಗೆ ಬಂದ ನಂತರ ಆತ ಒಂದು ಹೋಟೆಲ್ನಲ್ಲಿ ಉಳಿದುಕೊಂಡು, ಆ ನಂತರ ನನ್ನನ್ನು ಭೇಟಿ ಮಾಡಲಿದ್ದಾನೆ. ಆ ನಂತರ ಆತನನ್ನು ಬಿಹಾರಕ್ಕೆ ವಾಪಸ್ಸು ಕಳಿಸುವ ವ್ಯವಸ್ಥೆಯನ್ನು ಮಾಡಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.
ಬರೀ ಅರ್ಮಾನ್ ಅಷ್ಟೇ ಅಲ್ಲ, ಆತನ ಸೈಕಲ್ ಸಹ ಮುಂಬೈಗೆ ಏರೋಪ್ಲೇನ್ನಲ್ಲಿ ಬರಲಿದ್ದು, ಆತನ ಜತೆಗೇ ಬಿಹಾರಕ್ಕೆ ವಾಪಸ್ಸಾಗಲಿದೆಯಂತೆ. ಇನ್ನು ಬಿಹಾರದಲ್ಲಿ ಸೋನುಗೆ ಸಾಕಷ್ಟು ಅಭಿಮಾನಿಗಳಿದ್ದು, ಅವರನ್ನು ನೋಡುವುದಕ್ಕೆ ಸೋನು ಯಾವಾಗ ಬರುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಸೋನು, 'ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ನಾನು ಸಹ ತುದಿಗಾಲಲ್ಲಿ ನಿಂತಿರುವೆ. ಆದರೆ, ಅದಕ್ಕೆ ಸ್ವಲ್ಪ ಸಮಯ ಬೇಕು. ಸದ್ಯಕ್ಕೆ ಈ ಸಮಸ್ಯೆಗಳೆಲ್ಲಾ ಮುಗಿಯುತ್ತಾ ಬಂದಿದ್ದರೂ, ಇನ್ನಷ್ಟು ಜನರಿಗೆ ನನ್ನ ಅವಶ್ಯಕತೆ ಇದೆ. ಅವರಿಗೆ ಸಹಾಯ ಮಾಡಿ, ಆ ನಂತರ ಭೇಟಿಯಾಗುವುದಕ್ಕೆ ಹೊರಡುತ್ತೇನೆ' ಎಂದು ಅವರು ಹೇಳಿದ್ದಾರೆ.