

ಬೆಂಗಳೂರು: ಪುನೀತ್ ರಾಜಕುಮಾರ್ ನಿಧನರಾದ ಮೇಲೆ ಅವರ ನೆನಪಿನಲ್ಲಿ ಹಲವು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಈಗ ಮಹಿ ಶಿವಶಂಕರ್ ಎಂಬ ಪುನೀತ್ ಅಭಿಮಾನಿಯೂ, ತಮ್ಮ ಮೆಚ್ಚಿನ ನಟನ ನೆನಪಲ್ಲಿ 'ಅಪ್ಪು ಕಥಾಗಾನಂ' ಎಂಬ ಒಂದು ಹಾಡು ಹೊರತಂದಿದ್ದಾರೆ. ಆ ಹಾಡನ್ನು ಪುನೀತ್ ಹುಟ್ಟುಹಬ್ಬವಾದ (ಮಾ.17) ಯೂಟ್ಯೂಬ್ನ ಬಿವಿಎಂ ಕ್ರಿಯೇಷನ್ಸ್ ಎಂಬ ಚಾನಲ್ನಲ್ಲಿ ಬಿಡುಗಡೆ ಮಾಡಿದ್ದಾರೆ.
ಮಹಿ ಶಿವಶಂಕರ್ ಮೂಲತಃ ಆಂಧ್ರದವರು. ಬೆಂಗಳೂರಿನಲ್ಲಿ ತಮ್ಮ ಜೀವನ ಕಟ್ಟಿಕೊಂಡವರು. ಪುನೀತ್ ರಾಜಕುಮಾರ್ ಅಭಿಮಾನಿಯಾಗಿರುವ ಶಿವಶಂಕರ್, ಅವರ ಅಗಲಿಕೆಯ ನೋವನ್ನು ಹಾಡೊಂದರ ಮೂಲಕ ಹಿಡಿದಿಟ್ಟಿದ್ದಾರೆ. 'ಎಲ್ಲಿ ಹೋದೆಯೋ ನೀನೆಲ್ಲಿ ಇರುವೆಯೋ' ಎಂದು ಸಾಗುವ ಈ ಹಾಡನ್ನು ರಾಜೇಶ್ ಕೃಷ್ಣನ್ ಮತ್ತು ಜಯಶ್ರೀ ಹಾಡಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿರುವ ಈ ಹಾಡಿಗೆ ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದರು, ಸೋಹನ್ ಅಭರಾಮ್ ಎನ್ನುವವರು ನಿರ್ದೇಶಿಸಿದ್ದಾರೆ. ಇನ್ನು, ಶಿವಶಂಕರ್ ಅವರೇ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಮೂಲತಃ ನಿರ್ಮಾಪಕರೂ ಆಗಿರುವ ಶಿವಶಂಕರ್ಗೆ ಈ ಹಾಡನ್ನು ತಮ್ಮ ಹೊಸ ಚಿತ್ರದಲ್ಲೂ ಬಳಸಿಕೊಳ್ಳುವ ಯೋಚನೆ ಇದೆಯಂತೆ. ಈಗಾಗಲೇ ಬಿವಿಎಂ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಎರಡು ತೆಲುಗು ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಈಗ ಕನ್ನಡದಲ್ಲಿ ತಮ್ಮ ಮೂರನೇ ಚಿತ್ರವನ್ನು ನಿರ್ಮಿಸಲು ಅವರು ಸಜ್ಜಾಗಿದ್ದು, ಈ ಹಾಡನ್ನು ಆ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತದಂತೆ.
ಈ ಕುರಿತು ಮಾತನಾಡುವ ಶಿವಶಂಕರ್, 'ನಾನು ಅಪ್ಪು ಅವರ ಅಪ್ಪಟ ಅಭಿಮಾನಿ. ನನ್ನ ಮನದ ಭಾವನೆಯನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸಿದ್ದೇನೆ. ಈ ಹಾಡನ್ನು ನೋಡಿ ರಾಘಣ್ಣ, ಪೂರ್ಣಿಮಾ ರಾಮ್ ಕುಮಾರ್ ಅವರು ಮೆಚ್ಚಿಕೊಂಡಿದ್ದಾರೆ. ಮೇನಲ್ಲಿ ಹೊಸ ಚಿತ್ರವನ್ನು ಪ್ರಾರಂಭಿಸುತ್ತಿದ್ದೇವೆ. ಅದರಲ್ಲಿ ಈ ಹಾಡನ್ನೂ ಬಳಸಿಕೊಳ್ಳುತ್ತಿದ್ದೇವೆ. ಸಾಧನೆ ಮಾಡಲು ಹೊರಟಾಗ ಹತ್ತಾರು ಅಡ್ಡದಾರಿಗಳಿರುತ್ತವೆ. ಒಳ್ಳೆಯ ದಾರಿ ತೋರಿಸುವ ಒಬ್ಬ ಗಾಡ್ಫಾದರ್ ಇದ್ದರೆ ಆ ಹಾದಿ ಸುಗಮವಾಗಿರುತ್ತೆ ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ' ಎನ್ನುತ್ತಾರೆ ಮಹಿ ಶಿವಶಂಕರ್,