

'ದುನಿಯಾ' ವಿಜಯ್ ಅಭಿನಯದ ಜತೆಗೆ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ 'ಸಲಗ' ಚಿತ್ರದ ಚಿತ್ರೀಕರಣ ಲಾಕ್ಡೌನ್ಗೂ ಮುಂಚೆಯೇ ಮುಗಿದಿತ್ತು. ಇದೇ ಸಂತೋಷದಲ್ಲಿ ಚಿತ್ರತಂಡ ಕುಂಬಳಕಾಯಿ ಸಹ ಒಡೆದಿತ್ತು.
ಆದರೆ, ಚಿತ್ರವನ್ನು ಪೂರ್ತಿ ಎಡಿಟ್ ಮೇಲೆ, ಒಂದು ಹಾಡು ಬೇಕು ಎಂದು ಚಿತ್ರತಂಡಕ್ಕೆ ಅನಿಸಿದೆ. ಸರಿ, ಸಂಗೀತ ನಿರ್ದೇಶಕ ಚರಣ್ರಾಜ್ ಅವರಿಂದ ಒಂದು ಹಾಡು ಕಂಪೋಸ್ ಮಾಡಿಸಿ, ಸೀದಾ ಮಲೆನಾಡಿನ ಸುಂದರ ಪರಿಸರದಲ್ಲಿ ಇದೀಗ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.
ಚಿತ್ರೀಕರಣ ಮಾಡುವುದಕ್ಕೆ ಸರ್ಕಾರವೇನೋ ಅನುಮತಿ ನೀಡಿದೆಯಾದರೂ, ಹೆಚ್ಚು ಜನ ಚಿತ್ರೀಕರಣದಲ್ಲಿ ಭಾಗವಹಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ, ವಿಜಯ್ 12 ಮಂದಿಯ ತಂಡದೊಂದಿಗೆ ಈ ಹಾಡಿನ ಚಿತ್ರೀಕರಣವನ್ನು ಮಾಡಿದ್ದಾರೆ.
'ಮಳೆಯೇ ಮಳೆಯೇ ಅಂಬೆಗಾಲಿಡುತ್ತಾ ಸುರಿಯೇ...' ಎಂದು ಸಾಗುವ ಈ ಹಾಡನ್ನು ಮಳೆಯಲ್ಲಿ ಚಿತ್ರೀಕರಿಸದಿದ್ದರೆ ಹೇಗೆ? ಅದೇ ಕಾರಣಕ್ಕೆ, ವಿಜಯ್ ಮತ್ತು ತಂಡದವರು ಮಲೆನಾಡಿಗೆ ಹೋಗಿದ್ದಾರೆ. ಅಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಅಲ್ಲೇ ಇದ್ದು ಹಾಡನ್ನು ಚಿತ್ರೀಕರಿಸಿಕೊಂಡು ಬಂದಿದ್ದಾರೆ.
ವಿಜಯ್ ಮತ್ತು ಸಂಜನಾ ಆನಂದ್ ಅಭಿನಯಿಸಿರುವ ಈ ಹಾಡನ್ನು ಮುಳ್ಳಯ್ಯನಗಿರಿ, ಸಕಲೇಶಪುರ ಸೇರಿದಂತೆ ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ.
'ಸಲಗ' ಚಿತ್ರದಲ್ಲಿ ವಿಜಯ್ ಮತ್ತು ಸಂಜನಾ ಜತೆಗೆ ಧನಂಜಯ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣ ಮಾಡಿದ್ದು, ಚರಣ್ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರವನ್ನು ಕೆ.ಪಿ. ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ.